- ರೈತರಿಗೆ ಶಕ್ತಿ ತುಂಬುವಲ್ಲಿ ಕೃಷಿ ವಿ.ವಿ.ಗಳ ಪಾತ್ರ ಅಪಾರ ಸಚಿವ ಚಲುವರಾಯಸ್ವಾಮಿ.
ಚಿತ್ರದುರ್ಗ ಅ 6: (ಕೃ ವಾ) ಬರ ಪರಿಸ್ಥಿತಿಯಲ್ಲಿ ಕೃಷಿ ವಿಶ್ವ ವಿದ್ಯಾಲಯಗಳು ರೈತರಿಗೆ ಇನ್ನಷ್ಟು ತಾಂತ್ರಿಕ ಶಕ್ತಿ ನೀಡಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಕರೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಬಬ್ಬೂರು ತೋಟಗಾರಿಕಾ ಸಂಶೋಧನಾ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡಿದರು. ರಾಜ್ಯಾದ್ಯಂತ ಈ ಬಾರಿ ಮಳೆ ನಿರಾಶಾದಾಯಕವಾಗಿದೆ. ಈ ಆಗಸ್ಟ್ ನಲ್ಲಿ ಕಳೆದ 123 ವರ್ಷ ಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಿದೆ .
ಈಗಾಗಲೇ 195 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿದ್ದು ನಮ್ಮ ಮನವಿಯ ಮೇರೆಗೆ ಕೇಂದ್ರ ಅಧ್ಯಯನ ತಂಡ ಆಗಮಿಸಿದೆ. ನೈಜತೆ ಅರಿತು ಪರಿಶೀಲಿಸಲು ಮನವಿ ಮಾಡಿದ್ದೇವೆ ಎಂದು ಚಲುವರಾಯಸ್ವಾಮಿ ಹೇಳಿದರು.
ಎನ್.ಡಿ.ಆರ್ .ಎಫ್ ಮಾನ ದಂಡಗಳನ್ನು ಬದಲಾವಣೆ ಮಾಡಲು ಸಹ ನಾವು ಕೋರಿದ್ದೇವೆ . ಎಂತಹುದೇ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ರೈತರನ್ನು ಕೈ ಬಿಡುವುದಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಭರವಸೆ ನೀಡಿದರು.
ಕೃಷಿ ನಮ್ಮ ನಾಡಿನ ಜೀವ ಸಂಸ್ಕೃತಿ ರಾಜ್ಯದಲ್ಲಿ ರೈತರಿಗೆ ಶಕ್ತಿ ತುಂಬಲು ಹಲವು ಯೋಜನೆಗಳನ್ನು ರೂಪಿಸುವ ಜೊತೆಗೆ ತಾಂತ್ರಿಕ , ವೈಜ್ಞಾನಿಕ ನೆರವು ನೀಡಲಾಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೃಷಿ ವಿಶ್ವ ವಿದ್ಯಾನಿಲಯಗಳು,
ಕೃಷಿ ವಿಜ್ಞಾನಿಗಳ ಪಾತ್ರ ಅಪಾರ ಎಂದು ಸಚಿವರು ಶ್ಲಾಘಿಸಿದರು.
- ಕೃಷಿ ನವೋದ್ಯಮಕ್ಕೆ 10 ಕೋಟಿ ಮೀಸಲಿರಿಸಲಾಗಿದೆ. 50 ಲಕ್ಷ ರೂ ವರಗೆ ಶೇ 4% ಬಡ್ಡಿ ದರದಲ್ಲಿ ಸಾಲ ಸೌಲಭ್ಯ. ಒದಗಿಸಲಾಗುತ್ತಿದೆ.
- ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಲಾಗುತ್ತಿದೆ.
- 5-15 ಲಕ್ಷದ ವರಗೆ ಕೇವಲ 3% ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡುತ್ಯಿರುವುದು ನಮ್ಮ ಸರ್ಕಾರದ ರೈತ ಪರ ಕಾಳಜಿಗೆ ಸಾಕ್ಷಿ ಎಂದು ಸಚಿವರು ಹೇಳಿದರು.
ನಮ್ಮ ಸರ್ಕಾರ ಕೃಷಿ ಭಾಗ್ಯ ಯೋಜನೆ ಮತ್ತೆ ಜಾರಿಗೆ ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರೈತಾಪಿ ಕುಟುಂಬಗಳಿಗೆ ನೆರವಾಗಿದ್ದಾರೆ .
ಮುಂದಿನ ವರ್ಷ ಇದಕ್ಕಾಗಿ 56000 ಕೋಟಿ ಮೀಸಲಿರಿಸಲಾಗುವುದು ಎಂದು ಕೃಷಿ ಸಚಿವರು ಹೇಳಿದರು.
ರಾಜ್ಯದಲ್ಲಿ ಕೃಷಿ ಭಾಗ್ಯ ಮತ್ತೆ ಪ್ರಾರಂಭ ಮಾಡಿದ್ದು 100 ಕೋಟಿ ಮೀಸಲಿರಿಸಲಾಗಿದೆ ಎಂದು ಚಲುವರಾಯಸ್ವಾಮಿ ವಿವರಿಸಿದರು.
ಈ ವರ್ಷ ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷ ಸರ್ಕಾರ ಸಿರಿಧಾನ್ಯ ಬೆಳೆಯುವ ರೈತರಿಗೆ 10000ಪ್ರೋತ್ಸಹ ಧನ ನೀಡುತ್ತಿದೆ ಎಂದರು
1916 ರಲ್ಲಿ ಪ್ರಾರಂಭವಾದ ಬಬ್ಬೂರು ಫಾರ್ಮ್ ನ ಶತಮಾನೋತ್ಸವ ಸಂಭ್ರಮದಲ್ಲಿ ನಾವು ಸಾಕ್ಷಿಯಾಗುತ್ತಿರುವುದು ಸಂತೋಷದ ವಿಷಯ.
ಈ ಕೇಂದ್ರದಿಂದ ಕಳೆದ 100 ವರ್ಷ ಗಳಲ್ಲಿ 24 ಬೆಳೆಗಳ 94 ತಳಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ , ಹಿರಿಯೂರು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬಬ್ಬೂರು ಫಾರಂನ ಶತಮಾನೋತ್ಸವ ಮತ್ತು ಸಿರಿಧಾನ್ಯ ಮೇಳ ಮತ್ತು ತೋಟಗಾರಿಕೆ ಬೆಳೆಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸ್ಮರಣ ಸಂಚಿಕೆಯನ್ನು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಅವರು ಬಿಡುಗಡೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ, ಹೊಳಲ್ಕೆರೆ ಶಾಸಕರಾದ ಡಾ.ಎ.ಚಂದ್ರಪ್ಪ, ಚಿತ್ರದುರ್ಗದ ಶಾಸಕರಾದ ಕೆ.ಸಿ.ವೀರೇಂದ್ರ ಪಪ್ಪಿ, ಮೊಳಕಾಲ್ಮೂರು ಕ್ಷೇತ್ರದ ಶಾಸಕರಾದ ಎನ್.ವೈ.ಗೋಪಾಲಕೃಷ್ಣ, ಹೊಸದುರ್ಗ ಶಾಸಕರಾದ ಬಿ.ಜೆ.ಗೋವಿಂದಪ್ಪ, ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಚಿದಾನಂದ ಎಂ.ಗೌಡ,ಮಾಜಿ ಲೋಕಸಭಾ ಸದಸ್ಯರಾದ ಎಂ.ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ , ಕೃಷಿ ತಜ್ಞ ಏಕಾಂತಯ್ಯ, ಸೇರಿದಂತೆ ಹತ್ತಾರು ಮಂದಿ ಪ್ರಗತಿಪರ ರೈತರು ಮತ್ತು ಸ್ಥಳೀಯ ಮುಖಂಡರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.