ಡಾ. ಮಿರ್ಜಾ ಬಶೀರ್, ಹಿರಿಯ ಪಶುವೈದ್ಯರು, ಖ್ಯಾತ ಸಾಹಿತಿ

ಕುಪ್ಪಣ್ಣಯ್ಯಂಗಾರ್ರವರ ಕಾಲಾನಂತರ ಅವರ ಮಕ್ಕಳು ಬ್ಯಾಟರಾಯಸ್ವಾಮಿ ದೇವಸ್ಥಾನದ ಅರ್ಚಕರಾಗಿ ಮುಂದುವರೆದಿದ್ದರು. ಅವರಲ್ಲಿ ನಾಗರಾಜು ಮತ್ತು ರಮೇಶ ಇಬ್ಬರೂ ದೇವಸ್ಥಾನದ ಕೆಲಸದ ಜೊತೆ ತೋಟ- ಮನೆಯ ಕೆಲಸವನ್ನೂ ನೋಡಿಕೊಳ್ಳುತ್ತಿದ್ದರು. ಅವರ ಮನೆಯಲ್ಲಿ ಯಾವಾಗಲೂ ಒಂದೆರಡು ಮಿಶ್ರತಳಿ ಹಸುಗಳಿದ್ದೇ ಇರುತ್ತಿದ್ದವು. ಆ ಹಾಲನ್ನೇ ಅವರು ಮನೆಯ ಬಳಕೆಗೆ ಇಟ್ಟುಕೊಂಡು ಡೈರಿಗೂ ಹಾಕುತ್ತಿದ್ದರು.

ನೊಣವಿನಕೆರೆಯ ಡೈರಿಯು ಆಗ ನಾನಿದ್ದ ಬಾಡಿಗೆ ಮನೆಯ ಪಕ್ಕದಲ್ಲಿತ್ತು. ದಿನವೂ ಬೆಳಿಗ್ಗೆ ಮತ್ತು ಸಾಯಂಕಾಲ ಹಾಲು ಹಾಕಲು ಬಂದ ನೂರಾರು ರೈತರು ಕಾಣಸಿಗುತ್ತಿದ್ದರು. ಅವರೆಲ್ಲರೂ ಯಾವ ಕೃತ್ರಿಮತೆಯಿಲ್ಲದೆ ತಮ್ಮ ಕಷ್ಟ ಸುಖಗಳನ್ನು ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು. ಜೊತೆಗೆ ದನಕರುಗಳ ಯೋಗಕ್ಷೇಮದ ಬಗ್ಗೆಯೂ ವಿವರಿಸುತ್ತಿದ್ದರು.

ಹೀಗಿದ್ದಾಗ ಒಮ್ಮೆ ನಾಗರಾಜ್ರವರ ಹೆಚ್.ಎಫ್. ಹಸುವಿಗೆ ಕೆಚ್ಚಲು ಬಾವು ಕಾಣಿಸಿಕೊಂಡಿತು. ಅದು ಚೊಚ್ಚಲು ಕರು ಹಾಕಿ ಒಂದು ವಾರ ಸಹಿತ ಆಗಿರಲಿಲ್ಲ. ಒಮ್ಮೆಲೇ ನಾಲ್ಕು ತೊಟ್ಟಿನಲ್ಲಿಯೂ ಹಾಲು ಕೆಟ್ಟು ಹೋಯಿತು. ಈ ಸಮಸ್ಯೆ ನನಗೆ ಹೇಳಿದಾಗ ಆಗಲೇ ರಾತ್ರಿ ಏಳು ಗಂಟೆ ಮೇಲಾಗಿತ್ತು. ಅವರ ಮನೆ ದೇವಸ್ಥಾನದ ಮುಂದೆಯೇ ಇತ್ತು. ನಾನು ನನ್ನ ಮನೆಗೆ ಅವರ ಮನೆಯ ಮುಂದೆಯೇ ಹೋಗಬೇಕಾಗಿತ್ತು. ಹಾಗೆ ಹೋಗುತ್ತಿದ್ದಾಗ ನನ್ನನ್ನು ತಡೆಹಾಕಿದ್ದರು. ಹಸುಗೆ ಮೂರು ವರ್ಷ ವಯಸ್ಸಾಗಿದ್ದರೂ ಅದು ಕಾಯಿಲೆನೂ ಕಂಡಿಲ್ಲ, ಆಸ್ಪತ್ರೆನೂ ಕಂಡಿಲ್ಲ, ಡಾಕ್ಟ್ರನ್ನು ಕಂಡಿಲ್ಲ ಸಾರ್ ಅಂದ್ರು ಹೆಮ್ಮೆಯಿಂದ ನಾಗರಾಜ್.

ಅಂದು ಬೆಳಿಗ್ಗೆ ಎಂಟು ಗಂಟೆಗೆ ಮನೆ ಬಿಟ್ಟಿದ್ದ ನಾನು ಇನ್ನೂ ವಾಪಸ್ ಮನೆ ಸೇರಿರಲಿಲ್ಲ. ಮಧ್ಯಾಹ್ನ ಊಟ ಆಗಿರಲಿಲ್ಲ. ಹೊಟ್ಟೆ ಹಸಿದು ಸಾಯಂಗಾಗಿತ್ತು. ದಿನವೂ ಇದೇ ಕತೆಯಾಗಿತ್ತು. ನನಗಾಗಲೇ  ಹತ್ತಿರತ್ತಿರ ನಲವತ್ತು ವರ್ಷ ವಯಸ್ಸಾಗಿತ್ತು. ಇನ್ನೂ ಯಾಕೆ ಸಕ್ಕರೆ ರೋಗ ತಗುಲಿಕೊಂಡಿಲ್ಲವಲ್ಲ ಎಂದು ಯೋಚಿಸುತ್ತಾ ಹಸು ಪರೀಕ್ಷೆಗೆ ಪ್ರಾರಂಭಿಸಿದೆ.

ಕೆಚ್ಚಲೆಲ್ಲ ಊದಿಕೊಂಡು ಕಲ್ಲಿನಂತೆ ಗಟ್ಟಿಯಾಗಿತ್ತು. ಚಿಕ್ಕ ಚಿಕ್ಕ ತೊಟ್ಟುಗಳನ್ನು ಹಿಡಿದು ಹಿಂಡುವುದಕ್ಕೂ ಆಗುತ್ತಿರಲಿಲ್ಲ. ಕುಳಿತರೆ ಕೆಚ್ಚಲು ನೆಲಕ್ಕೆ ಒತ್ತಿದಂತಾಗಿ ನೋವು ಹೆಚ್ಚಾಗುತ್ತಿದ್ದುದರಿಂದ ನೆಲದ ಮೇಲೆ ಕುಳಿತುಕೊಳ್ಳದೆ ಹಸು ನಿಂತೇ ಇರುತ್ತಿತ್ತು. ಆ ಯಮಯಾತನೆಯ ನೋವಿಗೆ ಹಸು ಮೇವು ತಿನ್ನುತ್ತಿರಲಿಲ್ಲ. ಮೆಲುಕು ಹಾಕುತ್ತಿರಲಿಲ್ಲ. ಚೊಚ್ಚಲು ಹೆರಿಗೆಯಾಗಿದ್ದು ಕೆಚ್ಚಲು ರಾದ್ಧಾಂತದಿಂದ ಹಸು ಗಾಬರಿ ಬಿದ್ದಿತ್ತು. ಜ್ವರ ಏರಿ ಮೂಗೆಲ್ಲ ಒಣಗಿ ಹೋಗಿತ್ತು. ಆದರೂ ಹಸು ತನ್ನ ತಿಮಿರನ್ನು ಬಿಟ್ಟಿರಲಿಲ್ಲ. ಯಾರಾದರೂ ಹತ್ತಿರ ಹೋದರೆ ‘ಸಿರ್’ ಎಂದು ಹಾಯಲು ಬರುತ್ತಿತ್ತು. ಸಾಮಾನ್ಯವಾಗಿ ನಮ್ಮ ನಾಟಿ ದನಗಳು ಜೋರಿರುತ್ತವೆ. ಸಿಟ್ಟು ಜಾಸ್ತಿ. ಹಾಯುವುದು, ಒದೆಯುವುದು ಮಾಡುತ್ತವೆ. ಹೊಸಬರನ್ನು ಹತ್ತಿರ ಬಿಟ್ಟುಕೊಳ್ಳುವುದಿಲ್ಲ. ರೂಢಿಯಾದವರಿಗೆ ಮಾತ್ರ ಹಾಲು ಹಿಂಡಲು ಸಾಧ್ಯ. ಆದರೆ ಮಿಶ್ರತಳಿ ಹಸುಗಳು ಹಾಗಲ್ಲ. ಈ ಎಲ್ಲದರಲ್ಲೂ ಅವು ತದ್ವಿರುದ್ಧವಾಗಿರುತ್ತವೆ.

ಅಯ್ಯಂಗಾರರ ಹಸುವು 50% ಮಿಶ್ರತಳಿಯಾದರೂ ತನ್ನ ದೇಶೀತಳಿ ಲಕ್ಷಣಗಳನ್ನು ಒಂಚೂರೂ ಬಿಟ್ಟಿರಲಿಲ್ಲ. ಯಾರನ್ನೂ ಹತ್ತಿರ ಬಿಟ್ಟುಕೊಳ್ಳದೆ ತನ್ನ ಚಂಗಲು ಬುದ್ಧಿಯಿಂದ ಅಯ್ಯಂಗಾರರನ್ನು ಸಾಕುಸಾಕು ಮಾಡಿತ್ತು. ನನ್ನನ್ನಂತೂ ಹತ್ತಿರಕ್ಕೆ ಸಹ ಬಿಟ್ಟುಕೊಳ್ಳುತ್ತಿರಲಿಲ್ಲ. ಪಂಚೆ ಮತ್ತು ಸೀರೆಯನ್ನು ಮಾತ್ರ ನರಮಾನವರ ದಿರಿಸೆಂದು ಪರಿಗಣಿಸಿ ಪ್ಯಾಂಟು ಹಾಕಿಕೊಂಡಿದ್ದ ನನ್ನನ್ನು ನೋಡಿದ ಕೂಡಲೇ ಕೊಟ್ಟಿಗೆಯಲ್ಲೆಲ್ಲ ಬೆರಸಾಡಿಕೊಂಡು ಬರುತ್ತಿತ್ತು. ಗುಂಡಿ ಗೊಟ್ರಗಳಿದ್ದ ಆ ಕೊಟ್ಟಿಗೆಯಲ್ಲಿ ನಾನು ಸತ್ನೋ ಕೆಟ್ನೋ ಅಂತ ಲಾಂಗ್ ಜಂಪ್ ಮತ್ತು ರನ್ನಿಂಗ್ ರೇಸ್ ಮಾಡ್ತಾ ಹಸು ಏಟಿನಿಂದ ತಪ್ಪಿಸಿಕೊಳ್ಳುತ್ತಿದ್ದೆ.

ದೇವಸ್ಥಾನಕ್ಕೆ ಬಂದಿದ್ದ ಭಕ್ತಾದಿಗಳು, ಅಕ್ಕಪಕ್ಕದ ಮನೆಯವರೆಲ್ಲಾ ಸೇರಿ ಹತ್ತನ್ನೆರಡು ಜನ ಬಿಗಿ ಹಿಡಿದುಕೊಂಡರೂ ಹಸು ಬಗ್ತಿರಲಿಲ್ಲ. ದೊಡ್ಡ ದೇಹದ ಹಸು ಎಲ್ಲರನ್ನೂ ಚೆಲ್ಲಾಡಿ ಹೋಗುವ ಹಾಗೆ ಕೊಡವ್ಯಾಡುತ್ತಿತ್ತು. ಹೀಗೆ ಹತ್ತಿಪ್ಪತ್ತು ನಿಮಿಷವಾದರೂ ಚಿಕಿತ್ಸೆ ನೀಡುವಲ್ಲಿ ಯಾವ ಪ್ರಗತಿಯನ್ನೂ ಸಾಧಿಸಲಾಗಲಿಲ್ಲ. ಕೊನೆಗೆ ಯಾರೋ ಹಸು ಕಣ್ಣುಗಳಿಗೆ ಟವಲ್ಲು ಕಟ್ಟಿ, ಕೊಂಬು, ಮುಖ, ಬೆನ್ನು, ಬಾಲಗಳನ್ನು ಹಿಡಿದು ಹಗ್ಗ ಹಾಕಿ ಹಿಂದಿನ ಕಾಲುಗಳನ್ನು ಜೋಡಿಸಿ ಬಿಗಿ ಮಾಡಿದರು. ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಸಿದ್ಧವಾಗಿಟ್ಟುಕೊಂಡಿದ್ದ ನಾಲ್ಕು ಇಂಜೆಕ್ಷನ್ನುಗಳನ್ನು ಹಾಕಿದೆ. ಸರ್ಯಾದ ಇಂಜೆಕ್ಷನ್ ದಳೀರಿ ಸಾ… ಇನ್ನೊಂದ್ಸಲ ಯಾವ ರೋಗಾನೂ ಬಂದಿರಬಾರ್ದು ಡಾಕ್ಟ್ರಿಗೆ ಅನುಭವ ಐತೆ ಬಿಡ್ಲಾ ಡಾಕ್ಟ್ರಲ್ಲವ್ರು, ಹಳೇ ಹುಲಿ ಇತ್ಯಾದಿ ಸಲಹೆ, ಪ್ರಶಂಸೆಗಳು ಹಸು ಹಿಡಿದವರಿಂದ ಕೇಳಿಬರುತ್ತಿದ್ದವು. ಕೆಲವರು ದೇವಸ್ಥಾನದ ಹೊರಗೆ ಬಟ್ಟೆ ಮೇಲೆ ಸಿಡಿದ ಸಗಣಿ ಗಂಜಲವನ್ನು ತೊಳೆದುಕೊಳ್ಳತೊಡಗಿದರು.

ಇನ್ನೂ ಟ್ರೀಟ್ಮೆಂಟ್ ಪೂರಾ ಮುಗಿಲಿಲ್ಲ. ಬರ್ರಪ್ಪೋ ಹಸು ಹಿಡ್ಕಳ್ರಿ ಕೂಗು ಹಾಕಿದರು ನಾಗರಾಜಯ್ಯಂಗಾರ್. ಕೆಚ್ಚಲಿನ ನಾಲ್ಕು ತೊಟ್ಟುಗಳಿಗೆ ಹಾಲು ಬರುವ ನಾಳದಲ್ಲಿ ತೂರಿಸಿ ಆಯಿಂಟ್ಮೆಂಟ್ ಟ್ಯೂಬುಗಳನ್ನು ಹಾಕುವುದು ಬಾಕಿಯಿತ್ತು. ಬೇರೆ ಹಸುಗಳಲ್ಲಾದರೆ ಐದು ಹತ್ತು ನಿಮಿಷಗಳಲ್ಲಿ ಈ ಕೆಲಸ ಆಗಿಹೋಗುತ್ತದೆ. ಆದರೆ ನಮ್ಮ ಎದುರಿದ್ದ ಹಸು ಭಯಂಕರ ಅಸಹಕಾರ ಘೋಷಿಸಿ ನಮ್ಮನ್ನೆಲ್ಲ ಕಾಡತೊಡಗಿತು. ನಾನಾಗಲೀ, ಸುತ್ತಲಿದ್ದ ಹತ್ತಾರು ಜನರಾಗಲೀ ಚಿಕಿತ್ಸೆ ಕೊಡುವುದರಿಂದ ಹಿಂದೆಗೆಯುವ ಪ್ರಶ್ನೆಯೇ ಇರಲಿಲ್ಲ. ಎಷ್ಟೊತ್ತಾದರೂ, ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಎಂದು ಕೆಚ್ಚಲು ಬಾವಿನ ವಿರುದ್ಧ ಯುದ್ಧ ಸಾರಿದ್ದೆವು.

ಹೇಗೋ ಕಣ್ಣು ಮಿಟುಕಿಸುವಷ್ಟರಲ್ಲಿ ಇಂಜೆಕ್ಷನ್ ಮಾಡಿ ಮುಗಿಸಿದ್ದೆ. ಆದರೆ ಕೆಚ್ಚಲಿಗೆ ಟ್ಯೂಬುಗಳನ್ನು ಏರಿಸುವುದು ಅಷ್ಟು ಸುಲಭವಿರಲಿಲ್ಲ. ಟ್ಯೂಬನ್ನು ಹಿಡಿದು ಕೆಚ್ಚಲಿಗೆ ಕೈ ಹಾಕಿದ ಕೂಡಲೇ ಹಸು ಹೈಜಂಪ್ ಮಾಡತೊಡಗಿತು. ಹಿಂದಿನ ಒಂದು ಕಾಲಿಗೆ ಹಗ್ಗ ಕಟ್ಟಿ ಟ್ಯೂಬ್ ಏರಿಸಲು ನೋಡಿದೆವು. ಆಗಲಿಲ್ಲ. ಹಿಂದಿನ ಎರಡೂ ಕಾಲುಗಳನ್ನು ಜೋಡಿಸಿ ಹಗ್ಗ ಬಿಗಿದು ಟ್ಯೂಬ್ ಏರಿಸಲು ನೋಡಿದೆವು. ಆಗಲಿಲ್ಲ. ಹಸು ಬಾಲವನ್ನು ಎಷ್ಟು ರಭಸದಿಂದ ಬೀಸುತ್ತಿತ್ತೆಂದರೆ, ಬಾಲ ತಾಕಿದವನೊಬ್ಬನ ಕನ್ನಡಕ ರಸ್ತೆಯ ಆಚೆಯ ಬದಿಯಿದ್ದ ಅಂಗಡಿಯ ಕಟ್ಟೆಯ ಮೇಲೆ ಬಿದ್ದು ತುಂಡು ತುಂಡಾಯಿತು. ಕನ್ನಡದ ಗಾಜಿರಲಿ ಫ್ರೇಮ್ ಸಹಿತ ಕೆಲಸಕ್ಕೆ ಬಾರದಂತಾಗಿತ್ತು.

ಹತ್ತಾರು ಜನರು ಸುಸ್ತಾಗಿ ಸೋಲೊಪ್ಪಿ ಗೋಡೆಗಳ ಒರಗಿ ಕುಳಿತರು. ಇದೆಲ್ಲ ಮೇಲಿನ ನಾಟಕ ನಡೆದದ್ದು ದೇವಸ್ಥಾನದ ಎದುರು ರಸ್ತೆಯಲ್ಲಿ. ಹಸುವನ್ನು ಕೆಡವಿ ನಾಲ್ಕೂ ಕಾಲನ್ನು ಕಟ್ಟಿ ಹಾಕಿ ಕೆಚ್ಚಲಿಗೆ ಟ್ಯೂಬು ಏರಿಸೋಣವೆಂದರೆ ಅಲ್ಲೆಲ್ಲ ಗಟ್ಟಿ ನೆಲವಿದ್ದು ಹಸು ಕೆಡವಲು ಮೆತ್ತನೆ ನೆಲವಿರಲಿಲ್ಲ. ಅಲ್ಲಿಗೆ ಹತ್ತಿರದಲ್ಲೇ ನಮ್ಮನೆ ಇತ್ತು. ಅಲ್ಲಿ ಬೇಕಾದಷ್ಟು ಮೆತ್ತನೆಯ ನೆಲವಿತ್ತು. ಅಲ್ಲಿ ಹೋಗಿ ಹಸುವನ್ನು ಕೆಡವಿ ಕೆಚ್ಚಲಿಗೆ ಟ್ಯೂಬು ಹಾಕೋಣ ಎಂದು ಹೇಳಿದೆ. ಅಲ್ಲಲ್ಲಿ ಕುಳಿತು ಸುಧಾರಿಸಿಕೊಳ್ಳುತ್ತಿದ್ದವರೆಲ್ಲ ಎದ್ದು ನಮ್ಮನೆ ಕಡೆ ಹೊರಟರು.

ನಾಗರಾಜು ಹಸು ಹಿಡ್ಕಂಡ್ ಬಂದ್ರು. ಹಸುವನ್ನು ಕೆಡವಲು ಯಾರೋ ನೀರು ಸೇದುವ ಬಾವಿ ಹಗ್ಗ ತಂದರು. ದನಗಳನ್ನು ಕೆಡವುವ ನೂಲಿನ ಹಗ್ಗ ಆಸ್ಪತ್ರೆಯಲ್ಲಿತ್ತು. ಅಲ್ಲಿಂದ ಇಲ್ಲಿಂದ ಹುಲ್ಲು ತಂದು ಹಾಕಿ ಹಸು ಕೆಡವುವ ಜಾಗವನ್ನು ಮೆತ್ತಗೆ ಹಾಸಿಗೆಯ ರೀತಿ ಮಾಡಿದರು. ದನ ಕೆಡವುವುದರಲ್ಲಿ ನಿಪುಣನಾಗಿದ್ದ ಮತ್ತು ದನಗಳಿಗೆ ಲಾಳ ಕಟ್ಟುತ್ತಿದ್ದ ರಶೀದನನ್ನು ಎಲ್ಲಿಂದಲೋ ಎಳೆದುಕೊಂಡು ಬಂದಿದ್ದರು. ಪರಿಸ್ಥಿತಿಯನ್ನು ರಶೀದ ಹಿಡಿತಕ್ಕೆ ತೆಗೆದುಕೊಂಡು ತಾನು ಎಂತೆಂಥ ನಂಬರ್ ಹೋರಿಗಳನ್ನೆಲ್ಲ ಕೆಡವಿ ಲಾಳ ಕಟ್ಟಿದ್ದೇನೆ! ಇದೇನು ಮಹಾ? ಎಂದು ಇಲ್ಲದ ಮೀಸೆ ತಿರುವಿದ.

ನಮ್ಮನೆಗೆ ಬರುವ ಹೊತ್ತಿಗೆ ಕೆಲವರು ಗುಂಪಿಂದ ಕಳಚಿಕೊಂಡು ಹೋಗಿದ್ದರೂ ಅದರ ಎರಡರಷ್ಟು ಹೊಸಬರು ಬಂದು ಸೇರಿಕೊಂಡಿದ್ದರು. ಈಗಾಗಲೇ ಒಂದೆರಡು ಗಂಟೆಯಿಂದ ನಡೆದದ್ದನ್ನೆಲ್ಲಾ ಕೇಳುತ್ತ ಜನ ಇನ್ನೂ ಕುತೂಹಲಭರಿತರಾದರು. ನಾನು ಮನೆಗೆ ಬಂದವನೇ ಪ್ಯಾಂಟು ತೆಗೆದು ನಿಕ್ಕರ್ ಹಾಕಿಕೊಂಡು ಅಖಾಡಕ್ಕೆ ಇಳಿದೆ.

ಹಸುವನ್ನು ಹತ್ತಾರು ಜನ ಹಿಡಿದುಕೊಳ್ಳುವುದು, ರಶೀದ ಹಗ್ಗವನ್ನು ಅದರ ಬೆನ್ನಿನ ಮೇಲಿಂದ ಎಸೆದು ಸೊಂಟದ ಸುತ್ತ ಬರುವಂತೆ ಮಾಡಿ ಬಿಗಿದೆಳೆದು ಹಸುವನ್ನು ಕೆಡವಬೇಕಿತ್ತು. ಆದರೆ ರಶೀದ ಹಗ್ಗವನ್ನು ಬೆನ್ನ ಮೇಲೆ ಎಸೆದ ಕೂಡಲೆ ಹಸು ಲಾಂಗ್ ಜಂಪ್ ಮಾಡಿ ತಪ್ಪಿಸಿಕೊಳ್ಳುತ್ತಿತ್ತು. ಆ ಜಂಪಿಗೆ ಸಿಕ್ಕು ಹಸು ಹಿಡಿದಿದ್ದ ಒಂದಿಬ್ಬರು ಬಿದ್ದು ಚೆಲ್ಲಾಡಿ ಹೋಗುತ್ತಿದ್ದರು. ಮತ್ತೊಮ್ಮೆ ಹಸುವನ್ನು ಹಿಡಿದು ಜನ ರೆಡಿಯಾಗುತ್ತಿದ್ದರು. ರಶೀದ ಹಗ್ಗ ಎಸೆಯುತ್ತಿದ್ದ. ಹಸು ಲಾಂಗ್ ಜಂಪ್ ಮಾಡುತ್ತ ತಪ್ಪಿಸಿಕೊಳ್ಳುತ್ತಿತ್ತು. ಅರ್ಧ ಗಂಟೆ ಕಳೆಯಿತು. ಅಷ್ಟೊತ್ತಿಗೆ ಸರಿಯಾಗಿ ಕರೆಂಟ್ ಹೋಯಿತು. ಎಲ್ಲೆಲ್ಲೂ ಕತ್ತಲೆ.

ರಶೀದನಿಗೆ, ಜನರಿಗೆ ರೇಗಿಹೋಗಿತ್ತು. ಯಾರದ್ದೋ ಮನೆಯಿಂದ ಎಮರ್ಜೆನ್ಸಿ ಲೈಟ್ ತಂದರು. ಆ ಬೆಳಕು ಎಲ್ಲಿಗೂ ಸಾಲದಾಗಿತ್ತು. ನಾಗರಾಜಯ್ಯಂಗಾರರು ಸಾಕ್ಮಾಡ್ರತ್ತ. ನಮ್ಕೈಲಾಗಲ್ಲ. ದೇವರಿಟ್ಟಿದ್ದಾಗಲಿ ಎಂದು ಕೂಗಿದರು. ಆದರೆ ರಶೀದ ತಡಿಯಣ್ಣ ಇದೊಂದ್ಸಲ’ ಎಂದು ಹಗ್ಗ ಎಸೆದು ಒಮ್ಮೆಲೇ ಎಳೆದ. ಹಸು ಯಥಾ ಪ್ರಕಾರ ಲಾಂಗ್ ಜಂಪ್ ಮಾಡಿ ಹಗ್ಗ ತಪ್ಪಿಸಿಕೊಂಡಿತ್ತು. ಆ ಹಗ್ಗ ಹಸುವಿನ ಇನ್ನೊಂದು ಬದಿಯ ಕತ್ತಲಲ್ಲಿ ನಿಂತಿದ್ದ ನನ್ನ ಕಾಲಿಗೆ ಸುತ್ತಿಕೊಂಡಿತ್ತು. ಅದೇ ರಭಸದಿಂದ ರಶೀದ ಹಗ್ಗವನ್ನು ಎಳೆದ ಕೂಡಲೆ ನನ್ನನ್ನು ಎಳೆದಂತಾಗಿ ದಡಾರನೆ ಬಿದ್ದೆ. ಜನರೆಲ್ಲ ಹಸುವಿನ ಮೇಲೆ ಗಮನ ಕೇಂದ್ರೀಕರಿಸಿದ್ದರಿಂದ ನಾನು ಬಿದ್ದದ್ದಾಗಲೀ, ಎದ್ದದ್ದಾಗಲೀ ಯಾರಿಗೂ ಗೊತ್ತಾಗಲಿಲ್ಲ. ಕತ್ತಲು ಬೇರೆ ಕರ್ರಗೆ ಕವಿದುಕೊಂಡು ನನ್ನ ಮರ್ಯಾದೆ ಉಳಿಸಿತ್ತು. ಏನೂ ಆಗದವನಂತೆ ಬಿದ್ದ ಜಾಗದಿಂದ ಚಲಿಸಿ ಬೇರೆ ಕಡೆ ನಿಂತು ಮಾತಾಡತೊಡಗಿದೆ.

ಅದಾದ್ಮೇಲೆ ಕರೆಂಟ್ ಬಂತು. ಮತ್ತೆ ಅರ್ಧ ಗಂಟೆ ಪ್ರಯತ್ನಿಸಿದರೂ ಚಿಕಿತ್ಸೆ ಸಾಧ್ಯವಾಗಲಿಲ್ಲ. ಕೆಚ್ಚಲಿಗೆ ಟ್ಯೂಬುಗಳ ಹಾಕುವುದನ್ನು ರದ್ದು ಮಾಡಿದೆ. ನಾಗರಾಜಯ್ಯಂಗಾರ್ ಹಸು ಹೊಡೆದುಕೊಂಡು ಮನೆಗೆ ತೆರಳಿದರು. ಜನರೂ ಸಹ ಕರಗಿ ಹೋದರು. ಇನ್ನಿಂಗ್ಸ್ ಡಿಫೀಟ್ ಆದಂತಾಗಿ ನಾನು ಸ್ನಾನ ಮಾಡಲು ಬಚ್ಚಲಿಗೆ ಹೋಗಿ ಕಾಲು ಪರೀಕ್ಷಿಸಿಕೊಂಡೆ. ಎಡಗಾಲು ಮೊಣಕಾಲಿನ ಒಂದು ಗೇಣು ಕೆಳಗೆ ಸೇದುವ ಹಗ್ಗದಿಂದ ಚರ್ಮ ತರಿದುಹೋಗಿತ್ತು! ಬಿಸಿ ನೀರು, ಸೋಪು ಬಿದ್ದ ಕೂಡಲೇ ಚುರುಚುರು ಉರಿಯತೊಡಗಿತು. ಹೆಂಡತಿ ಮಕ್ಕಳಿಗೆ ಸಹ ಗೊತ್ತಾಗದಂತೆ ನಾನು ಬಿದ್ದ ಗುಟ್ಟು ಕಾಪಾಡಿಕೊಂಡೆ.

ಇದಾದ ನಂತರ ನಾಲ್ಕು ದಿನ ನಾಗರಾಜಯ್ಯಂಗಾರ್ ಹಸುವನ್ನು ಬೆಳಬೆಳಗ್ಗೆಯೇ ಆಸ್ಪತ್ರೆಗೆ ಹಿಡಿದುಕೊಂಡು ಬಂದು ಚಿಕಿತ್ಸೆ ಮಾಡಿಸಿಕೊಂಡು ಹೋದರು. ಆಸ್ಪತ್ರೆಯ ಟ್ರೆವಿಸ್ ಒಳಗೆ ಚಿಕಿತ್ಸೆ ನೀಡಿದ್ದಾಯಿತು. ಚಿಕಿತ್ಸೆ ಫಲಕಾರಿಯಾಯಿತು. ನಾಲ್ಕು ತೊಟ್ಟಲ್ಲೂ ಹಾಲು ಸರಿ ಹೋಯಿತು. ಎಲ್ಲವೂ ಸುಖಾಂತ್ಯವಾಯಿತು. ಆದರೆ ನನ್ನ ಕಾಲಿನ ಹಗ್ಗದ ಗಾಯದ ಗುರುತು ಮಾತ್ರ ಇಂದಿಗೂ ಹಾಗೇ ಉಳಿದಿದೆ.

ಹಿರಿಯ ಪಶುವೈದ್ಯರಾದ ಮಿರ್ಜಾ ಬಶೀರ್ ಅವರ ಜೊತೆ ಬೆಳಗ್ಗೆ 10 1 ಮತ್ತು 3 ರಿಂದ 6 ತನಕ ಪೋನಿನಲ್ಲಿ ಸಂಪರ್ಕಿಸಬಹುದು: 94481 04973

LEAVE A REPLY

Please enter your comment!
Please enter your name here