
ಭಾಗ – 2
ತುಮಕೂರಿನ ತೆಂಗಿಗೆ ಸಂಕಷ್ಟ ನಿಮ್ಮೆಲ್ಲರ ತೋಟದ ತೆಂಗಿನ ಇಳುವರಿ ಕಡಿಮೆಯಾಗಲು ಮುಖ್ಯ ಕಾರಣ ಏನು ಎಂದು ಇಂದು ಸಿಪಿಸಿಆರ್ ಐ ಹಿರಿಯ ವಿಜ್ಞಾನಿಗಳಿಗೆ ಕೇಳಿದೆ. ಅವರು ಹೇಳಿದ್ದು, ನಾನು ಈ ಹಿಂದಿನ ಪೋಸ್ಟ್ ನಲ್ಲಿ ಬರೆದಿದ್ದ ಹಾಗೆ ಹವಾಮಾನ ವೈಪರೀತ್ಯಗಳು ಕಾರಣ. ವೈಟ್ ಫ್ಲೈನಂತಹ ಕೀಟ ಬಾಧೆ ಹೆಚ್ಚಾಗಲು ಈ ಹವಾಮಾನ ವೈಪರೀತ್ಯವೆ ಕಾರಣವಾಗಿದೆ ಎಂದರು.
ತುಮಕೂರು ಮತ್ತು ಪೊಲ್ಲಾಚಿ ಭಾಗದಲ್ಲಿ ಹವಾಮಾನ ವೈಪರೀತ್ಯದ ಸಮಸ್ಯೆ ತೆಂಗಿನ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಇದೆ ಎಂದರು. ತುಮಕೂರು ಭಾಗದಲ್ಲಿ ಅಂತರ್ಜಲ ಆಳ ಆಳಕ್ಕೆ ಹೋಗುತ್ತಿರುವುದರಿಂದ ವಾತಾವರಣದ ತೇವಾಂಶ ಕಡಿಮೆ ಆಗುತ್ತಿದೆ ಎಂದರು. ಹವಾಮಾನ ಪ್ರತಿರೋಧಕ ಜಾಣ್ಮೆಗಳೇನು, ಅಂದರೆ ಇಂತಹ ಹವಾಮಾನ ವೈಪರೀತ್ಯಗಳಿಂದ ತಪ್ಪಿಸಿ ತೆಂಗನ್ನು ಉಳಿಸಿಕೊಳ್ಳಲು ನಾವೇನು ಮಾಡಬಹುದೆಂದು ಅವರನ್ನು ಪ್ರಶ್ನಿಸಿದೆ.
ಕೃಷಿವಿಜ್ಞಾನಿಗಳು ಎರಡು ಸಲಹೆ ನೀಡಿದರು. ಮೊದಲನೆಯದು ಮಣ್ಣಿನ ಆರೋಗ್ಯ ಸುಧಾರಣೆ. ತೋಟದ ಒಳಗೆ ತೆಂಗಿನ ಕೊಬ್ಬರಿ ಚಿಪ್ಪು ಹೊರತುಪಡಿಸಿ ಉಳಿದೆಲ್ಲಾ ಉಳಿಕೆಗಳನ್ನು ಸರಿಯಾಗಿ ಗೊಬ್ಬರ ಮಾಡಿ ಗಿಡಗಳಿಗೆ ಕೊಡಬೇಕು. ತೋಡದೊಳಗೆ ಹುರುಳಿ, ಸೆಣಬು ಮುಂತಾದ ಗೊಬ್ಬರ ಉತ್ಪಾದನೆ ಮಾಡುವ ಗಿಡ ಬೆಳೆಸಿ ಮಣ್ಣಿಗೆ ಸೇರಿಸಬೇಕು. ಬಯೋಚಾರ್ ಬಳಸುವುದು, ತೋಟಕ್ಕೆ ಕೆರೆಗೋಡು ಹಾಕುವುದು, ದ್ರವರೂಪಿ ಗೊಬ್ಬರಗಳ ಬಳಕೆ, ಬಿಸಿಲು ಗಾಳಿಗೆ ಒಣಗದಂತೆ ಮುಚ್ಚುವುದು ಮುಂತಾದ ಮಣ್ಣಿನ ಆರೋಗ್ಯ ವೃದ್ಧಿಸುವ ಕೆಲಸ ಮಾಡಬೇಕು.
ಎರಡನೆಯ ಸಲಹೆ, ಮೈಕ್ರೋ ಕ್ಲೈಮೇಟ್ ಸೃಷ್ಟಿಸುವುದು. ಇಡೀ ವಾತಾವರಣದಲ್ಲಿ ತೇವಾಂಶ ಕಾಪಾಡುವಂತೆ ಮರಗಿಡ ಬೇಲಿ ಬೆಳೆಸಿಕೊಳ್ಳುವುದು, ತೊಟದೊಳಗೆ ಸೂಕ್ತ ಮಿಶ್ರಬೆಳೆಗಳನ್ನು ಬೆಳೆಯುವುದು. ಇವುಗಳಿಂದ ಹವಾಮಾನ ವೈಪರೀತ್ಯಗಳಿಂದ ತೆಂಗನ್ನು ರಕ್ಷಿಸಬಹುದು ಎನ್ನುತ್ತಾರೆ.