ಕರ್ನಾಟಕದಲ್ಲಿ ಈ ಬಾರಿ ಅತೀವ ರಣರಣ ಬಿಸಿಲು ಕಾದಿದೆಯೇ ?

0

ಚಳಿಗಾಲ ಇನ್ನೂ ಮುಗಿದಿಲ್ಲ. ಆಗಲೇ ತಾಪಮಾನ ಏರಿಕೆಯಾಗಿದೆ. ಬೆಳಗ್ಗೆ ಎಂಟು ಗಂಟೆಗೆಲ್ಲ ಬಿಸಿಲಿನ ತೀಷ್ಣತೆ ಹೆಚ್ಚಿರುತ್ತದೆ. ಮಧ್ಯಾಹ್ನ 12 ಗಂಟೆ ಕಳೆಯುತ್ತಿದ್ದಂತೆ ಹೊರಗೆ ನಡೆದಾಡಲೂ ಸಾಧ್ಯವಾಗದಷ್ಟು ಬಿಸಿಲು ಹೆಚ್ಚಿರುತ್ತದೆ. ಈ ರೀತಿಯ ಹವಾಮಾನ ಏರಿಕೆ ಕುರಿತು ತಜ್ಞರು ನೀಡಿರುವ ಮಾಹಿತಿ ನಿಮ್ಮ ಮುಂದಿದೆ.

ಈ ನಡುವೆ ಕೆಲವು ದಿನಗಳಲ್ಲಿ ತೀವ್ರ ಚಳಿ ಮತ್ತೆ ಕೆಲವು ದಿನಗಳಲ್ಲಿ ಧಗೆ ಆಗುತ್ತಿದೆ. ಇದಕ್ಕೆ ಕಾರಣ ಗಾಳಿ ಬೀಸುವ ದಿಕ್ಕು ಬದಲಾಗುತ್ತಿರುವುದು. ಚಳಿಗಾಲದಲ್ಲಿ ಗಾಳಿಯ ದಿಕ್ಕು ಉತ್ತರದಿಂದ ಬೀಸಿದರೆ ಚಳಿ ತೀವ್ರತೆ ಹೆಚ್ಚುತ್ತದೆ.  ಪೂರ್ವ ದಿಕ್ಕಿನಿಂದ ಗಾಳಿ ಬೀಸಿದಾಗ ವಾತಾವರಣವನ್ನು ಬೆಚ್ಚಗೆ ಇಡುತ್ತದೆ.

ಮತ್ತೊಂದು ಗಮನಾರ್ಹ ಅಂಶ ಎಂದರೆ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿಯೂ ಒಣಹವೆ ಇದೆ.  ಇಂಥ ವಾತಾವರಣದಲ್ಲಿ ಮುಂಜಾನೆ ವೇಳೆ ಚಳಿ ಮತ್ತು ಬೆಳಗ್ಗೆ 8 ಗಂಟೆ ನಂತರ ಬಿಸಿಲು ಹೆಚ್ಚಿರುತ್ತದೆ. ಮಧ್ಯಾಹ್ನದ ವೇಳೆ ಬಿಸಿಲಿನ ಪ್ರಖರತೆ ಮತ್ತಷ್ಟೂ  ಹೆಚ್ಚಿರುತ್ತದೆ. ಕನಿಷ್ಟ ಉಷ್ಣಾಂಶ 15 ಡಿಗ್ರಿ ಸೆಲ್ಸಿಯಸ್‌ ಇದ್ದರೆ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್‌ ಇರಬಹುದು.  ಬೇಸಿಗೆ ಮಳೆ ಮಾರ್ಚ್‌ 15 ರಿಂದ ಆರಂಭವಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಏಪ್ರಿಲ್‌ – ಮೇ ತಿಂಗಳುಗಳಲ್ಲಿ ಇದರ ಪ್ರಮಾಣ ಹೆಚ್ಚಾಗಿರುತ್ತದೆ.

ಬೇಸಿಗೆ ಅವಧಿಯಲ್ಲಿ ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಗರಿಷ್ಠ 38ಕ್ಕಿಂತ ಅಧಿಕ ದಾಖಲಾಗುವ ಸಾಧ್ಯತೆ ಇದೆ. ವಿಶೇಷವಾಗಿ ಕಲ್ಬುರ್ಗಿ, ಯಾದಗರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಗದಗ, ಬಳ್ಳಾರಿ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 42 ರಿಂದ 44 ಡಿಗ್ರಿ ಸೆಲ್ಸಿಯಸ್‌ ತನಕ ದಾಖಲಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಡಾ. ಸಿ.ಎಸ್.‌ ಪಾಟೀಲ ತಿಳಿಸಿದರು.

ಹವಾಮಾನ ಬದಲಾವಣೆ ಕೆಲವೊಮ್ಮೆ ಸಹಜವಾಗಿರುತ್ತದೆ. ಇದರ ಜೊತೆಗೆ ಜಾಗತಿಕ ತಾಪಮಾನವೂ ಸೇರಿಕೊಂಡಿದೆ. ಇವೆಲ್ಲ ಸೇರಿಕೊಂಡು ಹವಾಮಾನದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬೇಸಿಗೆ ಕಾಲದಲ್ಲಿ ಶಾಖದ ಅಲೆಗಳ ಬಗ್ಗೆ ಎಚ್ಚರಿಕೆ ನೀಡುತ್ತೇವೆ. ಶಾಳದ ಅಲೆ ಅಂದರೆ 40 ಡಿಗ್ರಿ ಸೆಲ್ಸಿಯಸ್‌ ಗಿಂತ ಹೆಚ್ಚಾದರೆ, ಸಾಮಾನ್ಯಕ್ಕಿಂತ ನಾಲ್ಕು ಡಿಗ್ರಿ ಸೆಲ್ಸಿಯಸ್‌ ಹೆಚ್ಚಾದರೆ ಶಾಖದ ಅಲೆ ಎಂದು ಪರಿಗಣಿಸುತ್ತೇವೆ. ಇಂಥ ಸಂದರ್ಭದಲ್ಲಿ ಸಾರ್ವಜನಿಕರು ಮಧ್ಯಾಹ್ನದ ವೇಳೆ ಹೊರಗೆ ಬಿಸಿಲಿನಲ್ಲಿ ಅಡ್ಡಾಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಪ್ಪಿಸಬೇಕು.

ಬೆಂಗಳೂರಿನಲ್ಲಿ ಏಪ್ರಿಲ್‌, ಮೇ ಮೊದಲ, ಎರಡನೇ ವಾರ ಉಷ್ಣಾಂಶ ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇರುತ್ತದೆ. ಸುಮಾರು 38 ಡಿಗ್ರಿ ಸೆಲ್ಸಿಯಸ್‌ ತಲುಪಬಹುದು. ಕಳೆದ ವರ್ಷ ಬೆಂಗಳೂರಿನಲ್ಲಿ ಬೇಸಿಗೆ ಅವಧಿಯಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ.

ಕರಾವಳಿ, ದಕ್ಷಿಣ ಒಳನಾಡಿನಲ್ಲಿ ನೈರುತ್ಯ ಗಾಳಿಯ ಕಾರಣದಿಂದ ಮೇ 15 ರಿಂದ 20 ರ ನಂತರ ಉಷ್ಣಾಂಶದ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.  ಅಂದರೆ ಬಿಸಿಲಿನ ಪ್ರಖರತೆ ಕಡಿಮೆಯಾಗುತ್ತದೆ. ಆ ಅವಧಿಯಲ್ಲಿ ಬೆಂಗಳೂರು ಮಹಾನಗರದ ಉಷ್ಣಾಂಶವೂ ಕಡಿಮೆಯಾಗುವ ಸಾಧ್ಯತೆ ಇರುತ್ತದೆ.  ಏಕಂದರೆ ನೈರುತ್ಯದಿಂದ ಬಲವಾದ ಮೇಲ್ಮೈ ಗಾಳಿಯು ಬೀಸುತ್ತದೆ. ಸಾಕಷ್ಟು ಪ್ರಮಾಣದ ತೇವಾಂಶವೂ ಬರುತ್ತದೆ. ಮುಖ್ಯವಾಗಿ ದಕ್ಷಿಣ ಒಳನಾಡಿನಲ್ಲಿ ತಾಪಮಾನ ಕಡಿಮೆಯಾಗುತ್ತದೆ. ಇದೇ ಅವಧಿಯಲ್ಲಿ ಉತ್ತರ ಒಳನಾಡಿನಲ್ಲಿ ಜೂನ್‌ 1ರ ತನಕ ಬಿಸಿಲಿನ ಪ್ರಖರತೆ ಹೆಚ್ಚಿರುತ್ತದೆ.

LEAVE A REPLY

Please enter your comment!
Please enter your name here