
ಮುಂಗಾರು ೨೦೨೫ ರ ಮಳೆ ಮುನ್ಸೂಚನೆ
ಪ್ರತಿ ವರ್ಷದಂತೆ ಭಾರತ ಹವಾಮಾನ ಇಲಾಖೆಯು ಈ ವರ್ಷದ ನೈಋತ್ಯ ಮುಂಗಾರಿನ ಮಳೆಯ ಅಂದಾಜನ್ನು ಪ್ರಕಟಿಸಿದೆ. ಅದರಂತೆ ಈ ವರ್ಷ ದೇಶದಲ್ಲಿ ಮುಂಗಾರು ಮಳೆಯು ಸಾಮಾನ್ಯಕ್ಕಿಂತ ಅಧಿಕವಿರಲಿದೆ. ಜೂನ್ ನಿಂದ ಸೆಪ್ಟೆಂಬರ್ ತಿಂಗಳಿನವರೆಗೆ ಒಟ್ಟಾರೆಯಾಗಿ ದೀರ್ಘಾವಧಿ ಸರಾಸರಿಯ ೧೦೫ ಪ್ರತಿಶತ ಆಗುವ ಸಾಧ್ಯತೆಯಿದೆ.
ಈ ವರ್ಷ ಮುಂಗಾರಿನ ಪ್ರಮಾಣವನ್ನು ನಿರ್ಧರಿಸುವ ಪೆಸಿಫಿಕ್ ಸಮುದ್ರದ ತಾಪಮಾನ “ಎನ್ಸೊ (ENSO)” ಸಾಮಾನ್ಯವಾಗಿದ್ದು ಉತ್ತಮ ಮಳೆಗೆ ಪೂರಕವಾಗಿದೆ. ಒಂದು ವೇಳೆ ಅಧಿಕವಿದ್ದರೆ “ಎಲ್ ನಿನೊ” ಎಂದು ಹಾಗೂ ತಾಪಮಾನ ಕಡಿಮೆಯಿದ್ದರೆ “ಲಾ ನಿನಾ” ಎಂದು ಹೆಸರಿಡಲಾಗುವುದು. ಎಲ್ ನಿನೊ ಸಂದರ್ಭದಲ್ಲಿ ಭಾರತ ದೇಶದ ಮುಂಗಾರಿನ ಮೇಲೆ ವ್ಯತಿರಿಕ್ತ ಪ್ರಭಾವ ಬೀರಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇತ್ತು. ೨೦೨೩ ರಲ್ಲಿ ಬರಗಾಲ ಸ್ಥಿತಿ ಉಲ್ಭಣವಾಗಿ ರಾಜ್ಯದಲ್ಲಿ ನಷ್ಟದ ಪರಿಸ್ಥಿತಿ ಉಂಟಾಗಿದ್ದು ಇದೇ ಏಲ್ ನಿನೊ ಕಾರಣದಿಂದಾಗಿ. ಆದರೆ ಈ ವರ್ಷ ಏಲ್ ನಿನೊ ತಟಸ್ಥವಾಗಿದ್ದು ಉತ್ತಮ ಮಳೆಯ ನಿರೀಕ್ಷೆಯನ್ನು ಅಧಿಕವಾಗಿಸಿದೆ.
ಈ ಅಂಶಗಳ ಜೊತೆಗೆ ಮುಂಗಾರಿನ ಮೇಲೆ ಪ್ರಭಾವ ಬೀರುವ ಹಿಂದೂ ಮಹಾ ಸಾಗರದ ತಾಪಮಾನ ಹಾಗೂ ಯೂರೋಪ್- ಏಶ್ಯಾ ಖಂಡದ ಹಿಮದ ಹೊದಿಕೆಯೂ ಪೂರಕವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಈ ವರ್ಷದ ಮುಂಗಾರು ದೇಶದಾದ್ಯಂತ ಸಾಮಾನ್ಯಕ್ಕಿಂತ ಅಧಿಕವಿರುವ ಸೂಚನೆಯನ್ನು ನೀಡಲಾಗಿದೆ. ಆದರೆ ಕೆಲವೊಂದು ಪ್ರದೇಶಗಳಾದ, ಲಡಾಖ್, ಈಶಾನ್ಯ ಭಾರತದ ಕೆಲ ರಾಜ್ಯಗಳು ಹಾಗೂ ತಮಿಳಿನಾಡಿನ ಕೆಲ ಭಾಗಗಳಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಕಡಿಮೆ ಇರುವ ಸೂಚನೆಯನ್ನು ನೀಡಲಾಗಿದೆ
ಭಾರತ ಹವಾಮಾನ ಇಲಾಖೆಯ ನಕ್ಷೆಯಂತೆ ಕರ್ನಾಟಕದ ಬಹುತೇಕ ಭಾಗದಲ್ಲಿ ಮಳೆಯು ಸಾಮಾನ್ಯಕ್ಕಿಂತ ಅಧಿಕವಿರುವ ಸಾಧ್ಯತೆಯಿದ್ದು ಮುಂಗಾರಿನ ಮಳೆಯಾಧಾರಿತ ಭಾಗಗಳಿಗೆ ಆಶಾದಾಯಕ ಸೂಚನೆಯಾಗಿದೆ. ದೇಶದ ಖಾಸಗಿ ಹವಾಮಾನ ಮುನ್ಸೂಚನೆ ಸಂಸ್ಥೆಯಾದ ಸ್ಕೈಮೆಟ್ ಕೂಡ ಸಾಮಾನ್ಯ ಮಳೆಯ ಪ್ರಮಾಣವನ್ನು ಆಂದಾಜಿಸಿದೆ. ದೀರ್ಘಾವಧಿ ಸಾರಾಸರಿಯ ೧೦೩ ಫ್ರತಿಶತದ ಮುನ್ಸೂಚನೆ ನೀಡಿದೆ. ಜೂನ್ ತಿಂಗಳಿನಲ್ಲಿ ಮುಂಗಾರು ಸಾಮಾನ್ಯವಾಗಿದ್ದರೂ ಸ್ವಲ್ಪ ದುರ್ಬಲವಾಗಿದ್ದು ಜುಲೈ ತಿಂಗಳಿನ ನಂತರ ಮಳೆಯು ಚುರುಕಾಗುವ ಅನುಮಾನವನ್ನು ತಿಳಿಸಲಾಗಿದೆ.
ಹೆಚ್ಚಾಗಿ ಈ ವರ್ಷದ ಜಾಗತಿಕ ಹವಾಮಾನ ಪರಿಸ್ಥಿತಿ ೨೦೨೨ ರ ಮುಂಗಾರಿನಂತಿದೆ. 2020 ರಲ್ಲಿಯೂ ಸಹ ಒಟ್ಟಾರೆಯಾಗಿ ಉತ್ತಮ ಮಳೆಯಾದರೂ ಮುಂಗಾರಿನ ಬುಡದಲ್ಲಿ ರಾಜ್ಯದ ಕೆಲ ಭಾಗಗಳಲ್ಲಿ ಅತೀ ಕಡಿಮೆ ಮಳೆಯಾಗಿ ಬಿತ್ತನೆ ಕಾರ್ಯಗಳಿಗೆ ತೊಡಕಾಗಿತ್ತು. ಹಾಗೆಯೇ ಉತ್ತರ ಕರ್ನಾಟಕ ಭಾಗದಲ್ಲಿ ಜುಲೈ ತಿಂಗಳಿನ ಕೆಲವೇ ದಿನಗಳಲ್ಲಿ ೨೦೦ ಮಿಮೀ ಗೂ ಅಧಿಕ ಮಳೆಯಾಗಿ ಬೆಳೆ ನಾಶಕ್ಕೆ ಕಾರಣವಾಗಿತ್ತು ಅದೇ ರೀತಿ ಈ ವರ್ಷವೂ ಸಹ ಒಟ್ಟಾರೆಯಾಗಿ ಅಧಿಕ ಮಳೆಯಾಗುವ ಮುನ್ಸೂಚನೆಯಿದ್ದರೂ ಕೆಲವೊಂದು ಭಾಗ ಅಥವಾ ಕೆಲವೊಂದು ತಿಂಗಳಿನಲ್ಲಿ ಅತೀ ಹೆಚ್ಚು ಅಥವಾ ಅತೀ ಕಡಿಮೆ ಮಳೆಯಾಗುವ ಸಾದ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಹವಾಮಾನ ಇಲಾಖೆಯು ಮೇ ತಿಂಗಳಿನ ಕೊನೆಯಲ್ಲಿ ಇನ್ನೊಂದು ಹಂತದ ಮುನ್ಸೂಚನೆಯನ್ನು ನೀಡಲಿದೆ ಜೊತೆಗೆ ಮುಂಗಾರು ಪ್ರಾರಂಭವಾಗುವ ದಿನಾಂಕವನ್ನೂ ಪ್ರಕಟಿಸಲಿದೆ. ಹಾಗಾಗಿ ಹವಾಮಾನ ಇಲಾಖೆಯಿಂದ ನೀಡುವ ಮುನ್ಸೂಚನೆಯನ್ನು ಆಗಾಗ ಪರಿಶೀಲಿಸಿ ನಿಯಮಿತವಾಗಿ ಮುಂದಿನ ಚಟುವಟಿಗಳನ್ನು ಆಯೋಜಿಸಿಕೊಂಡರೆ ವ್ಯತಿರಿಕ್ತ ಹವಾಮಾನದಿಂದಾಗುವ ತೊಂದರೆಗಳನ್ನು ತಡೆಯಬಹುದು.

ನಕ್ಷೆಯಲ್ಲಿ ಕೇಸರಿ ಬಣ್ಣವು ಸಾಮಾನ್ಯಕ್ಕಿಂತ ಕಡಿಮೆ ಮಳೆ, ಹಸಿರು ಬಣ್ಣವು ಸಾಮಾನ್ಯ ಮಳೆ ಹಾಗೂ ನೀಲಿ ಬಣ್ಣವು ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸಾಧ್ಯತೆಯನ್ನು ಸೂಚಿಸುತ್ತದೆ.