
ಹದಿನೆಂಟನೇ ಶತಮಾನದ 1767 ರಲ್ಲಿ ಅಮೇರಿಕಾದಲ್ಲಿ ಪರಿಶುದ್ದವಾದ ಔಷಧೀಯ ಗುಣಗಳಿರುವ ಸ್ಪ್ರಿಂಗ್ ವಾಟರ್ ಎಂದು ನೀರನ್ನು ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುವುದು ಪ್ರಾರಂಭವಾಯ್ತು. ನಂತರ ಶುಧ್ಧೀಕರಿಸಿದ ನೀರು ಎಂದು ಬದಲಾಯ್ತು. ಈಗ ಖನಿಜಾಂಶಯುಕ್ತ ನೀರು ಎಂದು ಮಾರಾಟ ಆಗ್ತಾ ಇದೆ. ಭಾರತದಲ್ಲಿ 1965 ರಲ್ಲಿ ಬಾಟಲಿಗಳಲ್ಲಿ ನೀರು ಮಾರಾಟ ಪ್ರಾರಂಭವಾಯ್ತು.
ಇತ್ತೀಚಿನ ಅಂದಾಜಿನಂತೆ ಜಗತ್ತಿನಾದ್ಯಂತ ವಾರ್ಷಿಕ 490 ಬಿಲಿಯನ್ ಲೀಟರ್ ನೀರು ಮಾರಾಟವಾಗುತ್ತದೆ. ಅದರಲ್ಲಿ ಕೆಲ ಬಾಗ ಮತ್ತೆ ಮತ್ತೆ ಉಪಯೋಗಿಸುವ 10, 20 ಲೀಟರ್ ಕ್ಯಾನ್ ಗಳಲ್ಲಿ ಮಾರಾಟವಾಗುತ್ತದೆ. ನಿಖರ ಅಂಕಿ ಅಂಶಗಳು ಲಭ್ಯವಿಲ್ಲವಾದರೂ ಮಾರಾಟವಾಗುವ ನೀರಿನ 70- 75 ಪ್ರತಿಶತ ಬಾಟಲಿಗಳಲ್ಲಿಯೇ ಮಾರಾಟವಾಗುತ್ತದೆ. ಅದಕ್ಕಾಗಿ ಬೇಕಾಗುವ ಪ್ಲಾಸ್ಟಿಕ್ 6 ರಿಂದ 7 ಮಿಲಿಯನ್ ಟನ್ !!
ಅದರಲ್ಲಿ ಶೇಕಡಾ 30 ರಷ್ಟು ಮಾತ್ರ ಮರುಬಳಕೆಯಾಗುತ್ತೆ. ಉಳಿದ ಶೇಕಡಾ 60 ಬಾಗ ಅಂದರೆ 4 ರಿಂದ 4.5 ಮಿಲಿಯನ್ ಟನ್ ಪ್ಲಾಸ್ಟಿಕ್ ಕಸವಾಗಿ ಮಣ್ಣು , ನೀರು ಗಾಳಿಗೆ ಸೇರುತ್ತದೆ. ಅವು ಬಹುಪಾಲು ನ್ಯಾನೋ ಪ್ಲಾಸ್ಟಿಕ್ ಕಣಗಳಾಗಿ ಜೀವಿಗಳ ಆಹಾರ ಸರಪಳಿಯಲ್ಲೂ ಸೇರಿಹೋಗಿವೆ. ಜೀವಿ ಸಂಕುಲಗಳಿಗೆ ಮತ್ತು ಮನುಷ್ಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ.
ನಮ್ಮೂರು ಮಲೆನಾಡಿನ ಕಾಡಿನ ಮೂಲೆಯಲ್ಲಿರುವ ಒಂದು ಹಳ್ಳಿ. ಕುದುರೆಮುಖ ರಾಷ್ಟ್ರೀಯ ಉದ್ಯಾನದ ಸಮೀಪ. ಮಲೆನಾಡಿನ ಕಾಡಂಚಿನ ಹಳ್ಳಿಗಳಲ್ಲಿ ಒಂಟಿಮನೆಗಳು. ಹೆಚ್ಚಿನ ಮನೆಗಳಿಗೆ ಪಕ್ಕದ ಗುಡ್ಡದ ಸರಲುಗಳಲ್ಲಿ ಹುಟ್ಟಿ ಹರಿಯುವ ನೀರಿನ ಝರಿಗಳಿಂದ ಮನೆಬಳಕೆಯ ನೀರು ಒದಗಗುತ್ತದೆ. ಮಳೆಗಾಲದಲ್ಲಿ ಗುಡ್ಡಗಳ ಮೇಲೆ ಸುರಿಯುವ ಮಳೆನೀರು ಇಂಗಿ ವರ್ಷವಿಡೀ ನಿದಾನವಾಗಿ ಗುಡ್ಡಗಳ ನಡುವಿನ ಕೊರಕಲುಗಳಲ್ಲಿ ಜಿನುಗುತ್ತಾ ಹರಿಯುತ್ತವೆ. ಅಂತಹ ಸಾವಿರಾರು ಸರಲುಗಳೇ ಮಲೆನಾಡಿನಲ್ಲಿ ಹುಟ್ಟಿ ಹರಿಯುವ ನದಿಗಳ ಮೂಲಗಳು.
ಮೊನ್ನೆ ನಮ್ಮೂರಿನ ಸಮೀಪದ ಊರಿನಲ್ಲೊಂದು ಮದುವೆ. ಮನೆಯಂಗಳದಲ್ಲಿಯೇ ಚಪ್ಪರ ಹಾಕಿ ಮದುವೆ ಮಾಡುವುದು ಗಿರಿಜನರ ಪದ್ದತಿ. ಇತ್ತೀಚೆಗೆ ಊಟದ ವ್ಯವಸ್ಥೆಯನ್ನು ಕ್ಯಾಟರಿಂಗ್ ನವರಿಗೆ ವಹಿಸುವುದು ಪ್ರಾರಂಭವಾಗಿದೆ. ಮೊನ್ನೆ ಮದುವೆ ನಡೆದ ಮನೆಗೂ ದಿನಬಳಕೆಗೆ ನೀರು ಹುಟ್ಟುವ ಜಾಗದಿಂದಲೇ ಪೈಪ್ ನಲ್ಲಿ ಮನೆಗೆ ಬರುವ ನೀರು. (ಶುದ್ದ ಸ್ಪ್ರಿಂಗ್ ವಾಟರ್) ಆದರೆ ಮದುವೆ ಊಟದಲ್ಲಿ ಕ್ಯಾಟರಿಂಗ್ ನವರು ಒದಗಿಸಿದ್ದು ಬಾಟಲಿ ನೀರು !! ಹಾಂ! ಮಲೆನಾಡಿನ ಮೂಲೆಯ ಗಿರಿಜನರೂ ಅನುಸರಿಸುತ್ತಿರುವುದು “ನಾಗರಿಕ ಸಮಾಜದ” ರೀತಿ ನೀತಿಗಳನ್ನು ಅಂದರೆ ಆಶ್ಚರ್ಯ, ಗಾಬರಿ ಒಟ್ಟಿಗೆ ಉಂಟಾಗುತ್ತದೆ.
ವಿಶ್ವದ ಬಾಟಲಿ ನೀರಿನ ಮಾರುಕಟ್ಟೆ ಮೌಲ್ಯ ವಾರ್ಷಿಕ 272.1 ಶತಕೋಟಿ ಡಾಲರ್. 2272035 ಕೋಟಿ ರೂಪಾಯಿಗಳು.(22720350000000 ರೂ.) ಪ್ಲಾಸ್ಟಿಕ್ ಉತ್ಪಾದಕ ಪೆಟ್ರೋಕೆಮಿಕಲ್ ಕಂಪನಿಗಳಿಗೂ, ನೀರು ಬಾಟ್ಲಿಂಗ್ ಕಂಪನಿಗಳಿಗೂ, ವಿತರಣಾ ಏಜನ್ಸಿಗಳಿಗೂ ಮತ್ತು ವ್ಯಾಪಾರಿಗಳಿಗೂ ಅತ್ಯಂತ ಲಾಭದಾಯಕವಾದ ಬಳಕೆದಾರರಿಗೆ ಅತ್ಯಂತ ಸುಲಭವಾದ ಬಾಟಲಿ ನೀರಿನ ವ್ಯವಹಾರ ನಿಲ್ಲಿಸುವುದು ಸುಲಭವೇನಲ್ಲ.
ಈ ಹಿನ್ನೆಲೆಯಲ್ಲಿ ಮಾರಾಟವಾಗುವ ಪ್ರತಿ ಪ್ಲಾಸ್ಟಿಕ್ ಬಾಟಲಿಯೂ ಕಸ ಸೇರದಂತೆ ಹಿಂದಿರುಗಿ ಉತ್ಪಾದಕರಿಗೇ ತಲುಪಿ ಮರುಬಳಕೆಯಾಗುವಂತೆ ನೀತಿ,ಸೂಕ್ತ ಕಾನೂನು ರೂಪಿಸುವಂತೆ ಸರ್ಕಾರಗಳನ್ನು ಒತ್ತಾಯಿಸುವುದು ಸೂಕ್ತವಲ್ಲವೇ? ನಾಗರಿಕ ಸಮಾಜ ಮುಖ್ಯವಾಗಿ ಪ್ಲಾಸ್ಟಿಕ್ ಮಾಲಿನ್ಯದ ಸಮಸ್ಯೆ ಯ ಗಂಭೀರತೆಯನ್ನು ಅರಿತು ಅದರ ನಿಯಂತ್ರಣಕ್ಕಾಗಿ ಪ್ರಯತ್ನಿಸುತ್ತಿರುವ ಪರಿಸರ ಕಾರ್ಯಕರ್ತರು ಯೋಚಿಸಬೇಕಿದೆ.
ಗುರುಮೂರ್ತಿ ಜೋಗಿಬೈಲು.