ಬೆಂಗಳೂರಿನ ಹೆಸರಘಟ್ಟದಲ್ಲಿರುವ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ ಫೆಬ್ರವರಿ 27 ರಿಂದ ರಾಷ್ಟ್ರೀಯ ತೋಟಗಾರಿಕಾ ಮೇಳ ನಡೆಯತ್ತಿದೆ. ಇದನ್ನು ನೋಡಲು ದೇಶದ ನಾನಾ ಮೂಲೆಗಳಿಂದ ಜನರು ಆಗಮಿಸುತ್ತಿದ್ದಾರೆ. ಮಾರ್ಚ್ 1 ರಂದು ಮೇಳದ ಸಮಾರೋಪ ಸಮಾರಂಭ ಇದೆ.
ಈ ಬಾರಿಯ ತೋಟಗಾರಿಕೆ ಮೇಳದಲ್ಲಿ ವಿಶೇಷವಾಗಿ ಸೂತ್ರದ ಗೊಂಬೆಯಾಟ ಪ್ರದರ್ಶನ ನಡೆದಿದೆ. ಅರ್ಕಾ ಕ್ರಾಂತಿ ಎಂಬ ಹೆಸರಿನಲ್ಲಿ ಸೂತ್ರದಗೊಂಬೆಯಾಟದ ಮೂಲಕ ರೈತರಿಗೆ ಆಧುನಿಕ ಕೃಷಿಯ ಬಗ್ಗೆ, ಮತ್ತು IIHR ನ ತಂತ್ರಜ್ಞಾನದ ಬಗ್ಗೆ ತಿಳಿಸುವ ಸಲುವಾಗಿ ಈ ರೀತಿಯ ಪ್ರಯೋಗ ಮಾಡಲಾಗಿದೆ.
ಮುಖ್ಯವಾಗಿ ರೈತರ ಬದುಕು ಮತ್ತು ಕೃಷಿಯನ್ನು ಗಮನದಲ್ಲಿ ಇಟ್ಟುಕೊಂಡು, ರೈತರು ಮತ್ತು IIHR ಸಂಸ್ಥೆಯ ಸುತ್ತ ಕಥೆಯನ್ನು ಹೆಣೆಯಲಾಗಿದೆ. ಇದನ್ನು ರಚಿಸಿರುವ ಡಾ. ರಮ್ಯ ಹೆಚ್. ಆರ್ ಅವರು ಕೃಷಿ ವಿಜ್ಞಾನಿ. IIHR ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೃಷಿಯ ಜೊತೆ ರಂಗಭೂಮಿಯ ಹಿನ್ನೆಲೆ ಹೊಂದಿದ್ದಾರೆ. ಇವರು ಥಿಯೇಟರ್ ಥೆರಪಿ ತಂಡದ ನವೀನ್ ಕೃಷಿ ಅವರ ಜೊತೆಗೂಡಿ ತಾವೇ ಗೊಂಬೆಯಾಟ ನಿರ್ದೇಶಿಸಿದ್ದಾರೆ.
ಕಣ್ಮರೆ ಆಗುತ್ತಿರುವ ಕಲೆಯ ಮೂಲಕ ರೈತರಿಗೆ ಆಧುನಿಕ ಬೇಸಾಯ ಮತ್ತು ತಂತ್ರಜ್ಞಾನವನ್ನು ಸುಲಭವಾಗಿ ತಿಳಿಸಿಕೊಡುತ್ತಿದ್ದಾರೆ. ಹೆಚ್ಚಿರುವ ಬೇಸಾಯದ ವೆಚ್ಚವನ್ನು ಕಡಿಮೆಮಾಡಲು, ಅಧಿಕ ಇಳುವರಿಯ ತಳಿಗಳ ಬಗ್ಗೆ, ರೈತಸ್ನೇಹಿ ಯಂತ್ರೋಪಕರಣಗಳ ಬಗ್ಗೆ, ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ, ರೈತರು ಉದ್ಯಮದಾರರಾಗಲು ಮಾಡಬೇಕಾದ ಕಾರ್ಯಗಳು, ರೈತ ಮಹಿಳೆಯರ ಜೀವನೋಪಾಯ ಭದ್ರತೆಯ ಬಲವರ್ಧನೆಯ ಬಗ್ಗೆ ಹಾಗೂ ಪ್ರಸ್ತುತ ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದಕ್ಕೆ ಪರಿಹಾರಗಳನ್ನು ಕುರಿತಾಗಿ ಇನ್ನು ಅನೇಕ ಅಂಶಗಳನ್ನು ಗೊಂಬೆಯಾಟದ ಮೂಲಕ ರೈತರಿಗೆ ಮನವರಿಕೆ ಮಾಡುತ್ತಿದ್ದಾರೆ.

ರೈತರಿಗೆ ಸುಲಭವಾಗಿ ಅತ್ಯುತ್ತಮ ತಂತ್ರಜ್ಞಾನಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ಒಂದು ಕಡೆಯಾದರೆ, ಇನ್ನೊಂದೆಡೆ ಕಣ್ಮರೆ ಆಗುತ್ತಿರುವ ನಮ್ಮ ದೇಸಿ ಕಲೆ ಮತ್ತು ಕಲಾವಿದರನ್ನು ಉಳಿಸುವ ಹೊಸ ಹೆಜ್ಜೆ ಇದಾಗಿದೆ. ಇದು ತಮ್ಮ ಸಾಮಾಜಿಕ ಹೊಣೆ ಮತ್ತು ಜವಾಬ್ದಾರಿ ಎಂದು ರಮ್ಯ ಹೇಳುತ್ತಾರೆ.
ಈ ಗೊಂಬೆಯಾಟವು IIHR ನ ಮೂರುದಿನದ ತೋಟಗಾರಿಕಾ ಮೇಳದಲ್ಲಿ ಎರಡು ದಿನಗಳಿಂದ ಪ್ರದರ್ಶನಗೊಳ್ಳುತ್ತಿದೆ. ಮೂರನೇ ದಿನವೂ ಪ್ರದರ್ಶನ ಇರುತ್ತದೆ. ಈ ಪ್ರಯೋಗವ ಕುರಿತು IIHR ನ ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹೆರಾ, ಸಮಾಜ ವಿಜ್ಞಾನ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ಡಾ. ವಿಕೆಜೆ ರಾವ್ ಪ್ರಶಂಸಿದರು. ರೈತರು ಮತ್ತು ಜನಸಾಮಾನ್ಯರಿಗೆ ಇದು ಅತ್ಯಂತ ಉಪಯೋಗಕಾರಿ, ತಪ್ಪದೇ ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ತೋಟಗಾರಿಕೆ ಮೇಳದ ವೈವಿಧ್ಯತೆ ಕಣ್ತುಂಬಿಕೊಂಡ ಶಾಲಾ ವಿದ್ಯಾರ್ಥಿಗಳು ಗೊಂಬೆಯಾಟವನ್ನು ನೋಡಿ ಖುಷಿಪಟ್ಟರು. ರೈತರು ಸಹ ವಿನೂತನ ರೀತಿಯಲ್ಲಿ ತಂತ್ರಜ್ಞಾನಗಳ ಮಹತ್ವ ಹೇಳಿದ ನಾಟಕ ಪ್ರಯೋಗವನ್ನು ಮೆಚ್ಚಿಕೊಂಡರು.
ಅರ್ಕಾ ಕ್ರಾಂತಿ ತೊಗಲು ಬೊಂಬೆಯಾಟ. ರಚನೆ-ನಿರ್ದೇಶನ : ಡಾ. ರಮ್ಯ ಹೆಚ್. ಆರ್ ಮತ್ತು ನವೀನ್ ಕೃಷಿ ನಿರ್ಮಾಣ : IIHR ಬೆಂಗಳೂರು ಮತ್ತು DST – ಭಾರತ ಸರ್ಕಾರ. , ಕಲಾ ನಿರ್ದೇಶನ : ರಾಮಕೃಷ್ಣ ಬೆಳ್ತೂರು., ಸಂಗೀತ : ರಾಜಪ್ಪ ಕೋಲಾರ., ಸಹಯೋಗ : ಥಿಯೇಟರ್ ಥೆರಪಿ