ಪರಿಸರ ಸಂರಕ್ಷಣೆಗೆ ನಡೆದಾಡುವ ಪ್ಲೇಟ್ ಬ್ಯಾಂಕ್ !

0
ಶೈಲಜಾ ಗೌಡಟ್ಟಿ ಅವರ ಪರಿಸರ ಸಂಕರಕ್ಷಣಾ ಕಾಳಜಿ ಕುರಿತು ಪರಿಸರವಾದಿಗಳು ಪ್ರಶಂಸೆ ವ್ಯಕ್ತಪಡಿಸುತ್ತಿರುವುದು

ಪರಿಸರ ಸಂರಕ್ಷಣೆ ಕೆಲಸವನ್ನು ಹಲವು ರೀತಿ ಮಾಡಬಹುದು. ಮನೆಗಳಲ್ಲಿ ದಿನನಿತ್ಯ ಹಸಿಕಸ, ಒಣಕಸ ಬೇರ್ಪಡಿಸಿ ಪ್ರತ್ಯೇಕವಾಗಿ ಸಂಗ್ರಹಿಸುವುದು, ಎಲ್ಲಿಯೋ ಬಿಸಾಡದೇ ನಗರಪಾಲಿಕೆಯ ಕಸ ಸಂಗ್ರಹಣೆ ವಾಹನ ಬಂದಾಗ ನೀಡುವುದು, ತರಕಾರಿ, ದಿನಸಿ ಖರೀದಿಗೆ ಹೋಗುವಾಗ ಮನೆಯಿಂದಲೇ ಬಟ್ಟೆ ಬ್ಯಾಗ್ ಗಳನ್ನು ತೆಗೆದುಕೊಂಡು ಹೋಗುವುದು, ಪ್ಲಾಸ್ಟಿಕ್ ಕವರ್ ಗಳನ್ನು ತರುವುದಿಲ್ಲವೆಂದು ನಿರ್ಧರಿಸುವುದು, ಬಿಡುವು ಮಾಡಿಕೊಂಡು ಸಮಾನಾಸಕ್ತರೊಂದಿಗೆ ಸೇರಿ ಸಸಿಗಳನ್ನು ನೆಟ್ಟು ಸಂರಕ್ಷಿಸುವುದು, ಅಕ್ರಮವಾಗಿ ಮರಗಿಡ ಕಡಿತವಾಗದಂತೆ ಗಮನಿಸುವುದು ಹೀಗೆ ಅನೇಕ ರೀತಿಯಲ್ಲಿ ಪರಿಸರ ಸೇವೆ ಮಾಡಬಹುದು.

ಇವುಗಳ ಜೊತೆಗೆ ತೆಳು ಪ್ಲಾಸ್ಟಿಕ್ ಹಾಳೆಯ ಲೇಪನ ಇರುವ ಪೇಪರ್ ಪ್ಲೇಟ್, ನೀರು, ಕಾಫಿ ಕುಡಿಯುವ ಲೋಟಗಳನ್ನು ಬಳಸದಿರುವುದು ಸಹ ಮುಖ್ಯ. ಇವುಗಳ ತ್ಯಾಜ್ಯ ಮಣ್ಣಿನೊಂದಿಗೆ ಮಣ್ಣಾಗಿ ಬೆರೆಯುವುದು ಕಷ್ಟ. ಏಕೆಂದರೆ ಅವುಗಳಲ್ಲಿರುವ ಪ್ಲಾಸ್ಟಿಕ್ ಹಾಳೆ. ಇಂಥವುಗಳ ಬಳಕೆಯನ್ನೂ ತಪ್ಪಿಸುವುದು ಅಗತ್ಯ.

ಇವತ್ತು ಏಪ್ರಿಲ್ 22, 2025 ವಿಶ್ವ ಭೂಮಿ ದಿನ. ಬೆಂಗಳೂರು ಜ್ಞಾನಭಾರತೀ ಆವರಣದ ಜೈವಿಕ ಉದ್ಯಾನವನದಲ್ಲಿ ಪರಿಸರ ಸಂಘಟನೆಗಳ ಕಾರ್ಯಕರ್ತರು ಸೇರಿ ಭೂದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ನೆರೆದಿದ್ದ ಪರಿಸರ ಕಾರ್ಯಕರ್ತರು ಪರಿಸರ ಸಂರಕ್ಷಣೆ ಮಹತ್ವ ಪ್ರತಿಪಾದಿಸುವುದರ ಜೊತೆಗೆ ಜೈವಿಕ ಉದ್ಯಾನವನದ ಮಹತ್ವದ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಪರಿಸರ ಕಾರ್ಯಕರ್ತೆ ಶೈಲಜಾ ಗೌಡಟ್ಟಿ ಅವರು ಸ್ಟೀಲ್ ಲೋಟಗಳನ್ನು ತಂದಿದ್ದರು. ಇವುಗಳಲ್ಲಿ ತಾವೇ ಸ್ವತಃ ಮಾಡಿ ತಂದಿದ್ದ ಕಾಫಿಯನ್ನು ನೀಡಿದರು. ಇವರು ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಸ್ಟೀಲ್ ಲೋಟಗಳು, ಕಾಫಿಯೊಂದಿಗೆ ತೆರಳುವುದನ್ನು ಪರಿಚಿತ ಪರಿಸರ ಕಾರ್ಯಕರ್ತರು ಪ್ರಸ್ತಾಪಿಸಿದರು.

ಪರಿಸರ ಕಾರ್ಯಕರ್ತರಾದ ಶೈಲಜಾ ಗೌಡಟ್ಟಿ

ಕಾಫಿ ಕೊಡುತ್ತಾರೆ ಎನ್ನುವುದಕ್ಕಿಂತ ಪೇಪರ್ ಕಫ್ ಎಂಬ ಹಣೆಪಟ್ಟಿ ಹೊತ್ತ ಪ್ಲಾಸ್ಟಿಕ್ ಕಪ್ ಗಳ ಬಳಕೆಯನ್ನೂ ತಪ್ಪಿಸಲು ಶ್ರಮಿಸುತ್ತಿದ್ದಾರೆ ಎನ್ನುವುದರ ಬಗ್ಗೆ ನೆರೆದಿದ್ದವರು ಮೆಚ್ಚುಗೆಯಿಂದ ಮಾತನಾಡಿದರು. ಮುಖ್ಯವಾಗಿ ಇವರು ಪ್ಲೇಟ್ ಬ್ಯಾಂಕ್ ನಿರ್ವಹಣೆ ಮಾಡುತ್ತಿರುವುದು ಸಹ ಪ್ರಸ್ತಾಪವಾಯಿತು. ಗಮನಾರ್ಹ ಸಂಗತಿ ಎಂದರೆ ಶೈಲಜಾ ಗೌಡಟ್ಟಿ ಅವರು ಪರಿಸರ ಸಂಬಂ‍ಧಿ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುವುದರ ಸಲುವಾಗಿಯೇ ಪ್ಲೇಟ್ ಬ್ಯಾಂಕ್ ನಿರ್ವಹಣೆ ಮಾಡುತ್ತಿದ್ದಾರೆ.

ಇದರ ಬಗ್ಗೆ ಶೈಲಜಾ ಗೌಡಟ್ಟಿ ವಿವರಣೆ ನೀಡಿದರು. “ಪರಿಸರ ಸಂರಕ್ಷಣೆ ಕಾರ್ಯಕ್ರಮ ಎಂದರೆ ಎಲ್ಲ ರೀತಿಯಲ್ಲಿಯೂ ಪರಿಸರಸ್ನೇಹಿ ಆಗಿರಬೇಕು. ಯಾವುದೇ ಕಾರಣಕ್ಕೂ ಗೊತ್ತಿಲ್ಲದೆಯೂ ಪರಿಸರಸ್ನೇಹಿ ಅಲ್ಲದ ವಸ್ತುಗಳನ್ನು ಬಳಸಬಾರದು. ಈ ದಿಶೆಯಲ್ಲಿ ಪ್ಲೇಟ್ ಬ್ಯಾಂಕ್ ಮಾಡಲು ನಿರ್ಧರಿಸಿದೆ. ಪ್ರಸ್ತುತ 200 ಸ್ಟೀಲ್ ತಟ್ಟೆ, 200 ಕಾಫಿ ಕುಡಿಯುವ ಲೋಟಗಳು, 100 ನೀರು ಕುಡಿಯುವ ಲೋಟಗಳಿವೆ. ಇವುಗಳನ್ನು ಬಳಸಲು ಹಣ ನೀಡುವ ಅಗತ್ಯವಿಲ್ಲ” ಎಂದು ಹೇಳಿದರು.

ಮುಂಚಿತವಾಗಿಯೇ ತಿಳಿಸಿದರೆ ಬೆಂಗಳೂರು ನಗರದಲ್ಲಿ ನಡೆಯುವ ಪರಿಸರ ಕಾರ್ಯಕ್ರಮಗಳಿಗೆ ತಮ್ಮದೇ ಖರ್ಚಿನಲ್ಲಿ ಸ್ಟೀಲ್ ತಟ್ಟೆಗಳನ್ನು, ಲೋಟಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇವುಗಳಿಗೆ ಯಾವುದೇ ಡಿಪಾಜಿಟ್ ತೆಗೆದುಕೊಳ್ಳುವುದಿಲ್ಲ. ಇವುಗಳನ್ನು ಬಳಸಿದ ನಂತರ ಸ್ವಚ್ಚ ಮಾಡಿಕೊಡದೇ ಇದ್ದರೆ ಇವರೇ ತಮ್ಮೊಂದಿಗೆ ಬಂದ ಕಟಿಬದ್ಧ ಪರಿಸರ ಕಾರ್ಯಕರ್ತರೊಂದಿಗೆ ಸೇರಿ ಸ್ವಚ್ಚ ಮಾಡುತ್ತಾರೆ. ಆಗಾಗ ತೆಗೆದುಕೊಂಡು ಹೋದ ತಟ್ಟೆ ಲೋಟಗಳನ್ನು ಬಳಸಿದವರು ಎಲ್ಲಿಯೂ ಇಟ್ಟ ಕಾರಣ ಅವುಗಳ ಸಂಖ್ಯೆ ಕಮ್ಮಿಯಾಗುವುದೂ ಇದೆ. ಮೊದಮೊದಲು ಕೊರತೆಯಾದ ತಟ್ಟೆ, ಲೋಟಗಳ ಹಣ ತೆಗೆದುಕೊಳ್ಳಲು ನಿರಾಕರಿಸುತ್ತಿದ್ದರು. ನಂತರ ಪರಿಸರ ಕಾರ್ಯಕರ್ತರು ಮನವೊಲಿಸಿದ ಹಣ ತೆಗೆದುಕೊಳ್ಳುತ್ತಿದ್ದಾರೆ.

ವಿಶ್ವ ಭೂಮಿ ದಿನ ಆಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ ಪರಿಸರವಾದಿಗಳು

ಪ್ಲೇಟ್ ಬ್ಯಾಂಕ್ ನಿರ್ವಹಣೆ ಮಾಡುವುದರ ಜೊತೆಜೊತೆಗೆ ಸಸಿಗಳನ್ನು ನೆಡುವುದು, ನೀರೆರೆದು ಅವುಗಳನ್ನು ಪೋಷಿಸುವುದು, ಅಕ್ರಮವಾಗಿ ಮರಗಳ ಕಡಿತವಾದರೆ ಪ್ರತಿಭಟಿಸುವ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ. ಶಾಲಾ ಮಕ್ಕಳಿಗೆ ಪರಿಸರ ಸಂರಕ್ಷಣೆ ಮಹತ್ವ ತಿಳಿಸುತ್ತಿದ್ದಾರೆ.  ಈ ದಿಶೆಯಲ್ಲಿ ಇತ್ತೀಚೆಗೆ “ಹೊಂಬೇವು” ಎಂಬ ಸಂಸ್ಥೆ ಸ್ಥಾಪಿಸಿರುವುದಾಗಿ ತಿಳಿಸಿದರು.

“ಮುಂದಿನ ದಿನಗಳಲ್ಲಿ ಪ್ಲೇಟ್ ಬ್ಯಾಂಕಿನ ತಟ್ಟೆ, ಲೋಟಗಳ ಸಂಖ್ಯೆ ಹೆಚ್ಚಿಸುವುದರೊಂದಿಗೆ ಇವುಗಳನ್ನು ತೆಗೆದುಕೊಂಡು ಹೋಗಲು ವಾಹನ ವ್ಯವಸ್ಥೆ ಮಾಡುವ ಯೋಜನೆ ಇದೆ. ಮುಖ್ಯವಾಗಿ ಪ್ಲಾಸ್ಟಿಕ್ ತಟ್ಟೆ, ಲೋಟಗಳನ್ನು ಬಳಸುವುದು ನಿಲ್ಲಬೇಕು. ಇವುಗಳನ್ನು ಬಳಸುವುದಿಲ್ಲ ಎಂದು ಪ್ರತಿಯೊಬ್ಬರು ನಿರ್ಧರಿಸಬೇಕು. ಇದರಿಂದ ಗಮನಾರ್ಹ ಬದಲಾವಣೆ ಆಗುತ್ತದೆ. ಹೀಗೆ ಮಾಡುವುದು ನಮ್ಮೆಲ್ಲರ ಕರ್ತವ್ಯ” ಎಂದು ಶೈಲಜಾ ಗೌಡಟ್ಟಿ ತಿಳಿಸಿದರು.

LEAVE A REPLY

Please enter your comment!
Please enter your name here