ಮೈಸೂರು ನಗರದಲ್ಲಿ ಅಪರೂಪವಾಗಿ ಕಂಡ ದೊಡ್ಡ ಚಳ್ಳೆ ಮರ !

0
ಲೇಖಕರು: ಸಂಜಯ್‌ ಹೊಯ್ಸಳ

ಚಳ್ಳೆ ಹಣ್ಣಿನ ಮರಗಳು ಹಿಂದೆ ಸಾಮಾನ್ಯವಾಗಿದ್ದು ಇತ್ತೀಚೆಗೆ ಅಪರೂಪವಾಗುತ್ತಿರುವ ಮರಗಳು. ಗ್ರಾಮೀಣ ಭಾಗದಲ್ಲಿ ಹಳ್ಳದ ಭಾಗಗಳಲ್ಲಿ, ಬೇಲಿಯ ಬದಿಗಳಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಈ ಮರಗಳು ನಗರದ ಭಾಗದಲ್ಲಿ ಕಡಿಮೆ. ಮೈಸೂರು ನಗರದ ಹೃದಯ ಭಾಗದಲ್ಲಿ ಅಪರೂಪವಾಗಿ ಒಂದು ದೊಡ್ಡ ಚಳ್ಳೆಮರ ಇಂದು ಕಣ್ಣಿಗೆ ಬಿತ್ತು. ವಿ.ವಿ. ಮೊಹಲ್ಲಾದಲ್ಲಿ ಕುವೆಂಪು ಅವರ ಉದಯ ರವಿ ಮನೆ ಹಾಗೂ ಪಂಚವಟಿ  ವೃತ್ತದ ನಡುವಿನ ಭಾಗದ ಖಾಲಿ ನಿವೇಶನದಲ್ಲಿ ಇಂದು ಬೀಜ ಸಂಗ್ರಹ ಕಾರ್ಯದಲ್ಲಿ ಅತ್ತಿತ್ತ ಕಣ್ಣು ಕಾಯಿಸುವಾಗ ಈ ಅಪರೂಪದ ಹಣ್ಣಿನ ಮರ ಕಂಡಿತು.

ಪಂಚವಟಿ ವೃತ್ತದ ಬಳಿ ನಮ್ಮ ಕನ್ನಡ ಸಿನಿಮಾ ರಂಗದಲ್ಲಿ ಅರಣ್ಯ ವನ್ಯಜೀವಿಗಳಿಗೆ ಸಂಬಂಧಿಸಿದ ಕತೆಗಳ ಹಲವು ಅತ್ಯುತ್ತಮ ಸಿನಿಮಾಗಳನ್ನು ನಿರ್ಮಿಸಿ, ನಟಿಸಿರುವ ಎಂ.ಪಿ. ಶಂಕರ್ ರವರ ಮನೆ ಇರುವ ಕಾರಣ, ಅವರ ನೆನಪಿಗೆ ಎನ್ನುವಂತೆ ಅಲ್ಲಿನ ಆಟೋ ನಿಲ್ದಾಣಕ್ಕೆ ‘ಗಂಧದ ಗುಡಿ’ ಎಂದು ನಾಮಕರಣ ಮಾಡಲಾಗಿದೆ.

ನಾನು ನೋಡಿದ ಹೆಚ್ಚಿನ ಚಳ್ಳೆ ಮರಗಳು ಕುರುಚಲು ಗಿಡ ರೀತಿ ಇದ್ದದ್ದೆ ಹೆಚ್ಚು; ನಮ್ಮ ಜಮೀನಿನಲ್ಲಿ ಹಳ್ಳದ ಭಾಗದ ಹೊಲದಲ್ಲಿ ಒಂದು ಬೃಹತ್ ಚಳ್ಳೆ ಮರ ಇತ್ತು. ಅದನ್ನು ಬಿಟ್ಟರೆ ಇಷ್ಟು ದೊಡ್ಡ ಚಳ್ಳೆ ಮರ ಇವತ್ತೆ ನೋಡಿದ್ದು. ಸಾಮಾನ್ಯವಾಗಿ ಬೀಜ ಸಂಗ್ರಹಣೆ ಮಾಡುವಾಗ ವಯಸ್ಸಾದ ಬೃಹತ್ ಗಾತ್ರದ, ಆರೋಗ್ಯವಂತ ಮರಗಳಿಂದ ಬೀಜಗಳನ್ನು ಸಂಗ್ರಹಿಸಬೇಕು ಎನ್ನುವುದು ಗಿಡ- ಮರ ವಿಜ್ಞಾನವಾದ ” ಅರಣ್ಯ ಕೃಷಿ ”  ನಿಯಮ ಹೇಳುತ್ತದೆ! ಅಂಥ ಮರಗಳನ್ನು ಅಲ್ಲಿ ತಾಯಿ ಮರ/ ಎಂದು ಕರೆಯಲಾಗುತ್ತದೆ.

ಮನುಷ್ಯ ಸೇರಿ ಎಲ್ಲಾ ಜೀವಿಗಳಲ್ಲಿಯೂ ವಯಸ್ಸಾದಂತೆ ‘ಫಲವಂತಿಕೆ’ಯ ಪ್ರಮಾಣ ಕಡಿಮೆಯಾದರೆ, ಮರಗಳಲ್ಲಿ ಹೆಚ್ಚಾಗುತ್ತದೆ! ಫಲವಂತಿಕೆಯಷ್ಟೆ ಜೊತೆಗೆ ಆಮ್ಲಜನಕ, ಹಣ್ಣು, ಕಾಯಿ ಎಲ್ಲವುಗಳ ಉತ್ಪಾದನೆ ಕೂಡ ವಯಸ್ಸಾದ ಮರಗಳಲ್ಲಿ ಹೆಚ್ಚು. ಪ್ರಾಣಿಗಳಲ್ಲಿ ಮಾತ್ರ ವಯಸ್ಸಾದಂತೆ ಅವುಗಳ ಶಕ್ತಿ ಕುಂಠಿತವಾಗುತ್ತದೆ.

ಚಳ್ಳೆ ಹಣ್ಣು (Cordia myxa) ಕರ್ನಾಟಕದ ಬಹುತೇಕ ಭಾಗಗಳಲ್ಲಿ ಹಿಂದೆ ಸಾಮಾನ್ಯವಾಗಿ ಕಂಡು ಬರುತ್ತಿದ್ದ ಮರ. ಆದರೆ ಇತ್ತೀಚೆಗೆ ಇದರ ವ್ಯಾಪಕತೆ ಪ್ರಮಾಣ ಬಹಳ ಕಡಿಮೆಯಾಗಿದೆ. ಆಡುಭಾಷೆಯಲ್ಲಿ ದಕ್ಷಿಣದ ಜಿಲ್ಲೆಗಳಲ್ಲಿ ‘ಗೊಣ್ಣೆಹಣ್ಣು’ ಉತ್ತರದ ಕಡೆ ‘ಸಿಂಬಳದ ಹಣ್ಣು’ ಎಂದು ಕರೆಯಲ್ಪಡುವ ಈ ಹಣ್ಣು, ಆ ಪದಕ್ಕೆ ಅನ್ವರ್ಥದಂತಿದೆ. ಮೇಲಿನ ಸಿಪ್ಪೆ ತೆಗೆದರೆ ಅಂಟು ಅಂಟಾಗಿ, ಜಿಗುಟಾದ ಲೋಳೆಯಂತಹ ಜಾರುವ ಗುಣವನ್ನು ಹೊಂದಿರುವ ಈ ಹಣ್ಣಿನ ತಿರುಳು ‘ಚಳ್ಳೆಹಣ್ಣು” ಎಂಬ ಕನ್ನಡದ ಜನಪ್ರಿಯ ನುಡಿಗಟ್ಟಿಗೆ ಸೂಕ್ತವಾದ  ರೂಪಕ.

ಕೋತಿ, ಅಳಿಲಿನಂತಹ ಮರವಾಸಿ ಪ್ರಾಣಿಗಳು ಹಾಗೂ ಹತ್ತು ಹಲವು ಪಕ್ಷಿಗಳಿಗೆ ಭೂರಿ ಬೋಜನ ಒದಗಿಸುವ ಈ ಹಣ್ಣುಗಳು ಹೆಚ್ಚೆಚ್ಚು ಇದ್ದಷ್ಟು ವನ್ಯಜೀವಿಗಳಿಗೆ ಬಹಳ ಉಪಕಾರಿ. ಆದರೆ ಬದಲಾದ ಕೃಷಿ ವ್ಯವಸ್ಥೆಯಲ್ಲಿ ವಿಶಾಲ ಬದುಗಳು, ಗೋಮಾಳ, ಕೆರೆಮಾಳ, ರಾಜಕಾಲುವೆ, ಕರಾಬು ಜಮೀನು ಸೇರಿ ಚೂರೂ ಜಾಗವನ್ನು ಬಿಡದೆ ಕೃಷಿ ಅಥವಾ ಇತರ ಉಪಯೋಗಕ್ಕೆ ಬಳಸುತ್ತಿರುವ ನಾವುಗಳು ಈ ಮರಗಳನ್ನು ಅಪರೂಪವಾಗಿಸಿದ್ದೇವೆ. ಈ ಮರಗಳ ವಿಶೇಷವೆಂದರೆ ಇವು ಹಳ್ಳದ ಮಗ್ಗಲು, ಪೊದೆ- ಗಿಡಗಂಟಿಗಳು ಇರುವಲ್ಲೆ ಹೆಚ್ಚಾಗಿ ಬೆಳೆಯುವುದು.

ಮಾನವರು ಸಾಮಾನ್ಯವಾಗಿ ಬಳಸದ ಇಂತಹ ಹಣ್ಣಿನ ಗಿಡಗಳನ್ನು ಹೆಚ್ಚಾಗಿ ಬೆಳಸಿದಷ್ಟು ಅವುಗಳ ಹಣ್ಣುಗಳು ಬಹುತೇಕ ಸಂಪೂರ್ಣವಾಗಿ ವನ್ಯಜೀವಿಗಳಿಗೆ ಮೀಸಲಾಗುತ್ತವೆ. ಅದೇ ನಾವು ವನ್ಯಜೀವಿಗಳಿಗೆ ಮಾವು, ಹಲವು, ಸೀಬೆ ಬೆಳೆಸಿದರೆ ಮಾನವ ಅವನ್ನು ವನ್ಯಜೀವಿಗಳಿಗೆ ಉಳಿಸುತ್ತಾನೆಯೇ? ಖಂಡಿತಾ ಇಲ್ಲ. ಹೀಗಾಗಿ ಮರೆಯಾಗುತ್ತಿರುವ ಇಂತಹ ಅಪರೂಪದ ಮರಗಳನ್ನು ನಾವು ಹೆಚ್ಚು ಹೆಚ್ಚು ಬೆಳಸಬೇಕಾಗಿದೆ.

LEAVE A REPLY

Please enter your comment!
Please enter your name here