
ಧೋಗುಡುತ್ತಿರುವ ಮಳೆ , ಸುಯ್ ಸದ್ದಿನೊಂದಿಗೆ ಬೀಸುತ್ತಿರುವ ಗಾಳಿ ,ಬಿಸಿಲೇ ಕಾಣದ ಹಗಲು. ಪಾಚಿಗಟ್ಟಿದ ಅಂಗಳ, ಜೀರುಂಡೆಗಳ ಜೀಜೀ ನಾದ, ಸುರಿವ ಮಳೆಗೆ ಮಣ್ಣು ಎಲೆ ಕೊಳೆತು ಹರಡಿರುವ ವಿಶಿಷ್ಟ ಕಂಪು ನಮ್ಮ ಮಳೆಗಾಲದ ಲಕ್ಷಣ. ಈ ನಡುವೆ ಫೋನ್ ಬಂದರೆ ,ಯಾರಾದರೂ ಭೆಟ್ಟಿಯಾದರೆ,ಯಾರೋ ಮನೆಗೆ ಬಂದರೆ,ಯಾರದೊ ಮನೆಗೆ ಹೋದರೆ ಮಳೆಯೆಷ್ಟು ಎನ್ನುವುದೇ ನಮ್ಮ ಮೊದಲ ಮಾತು.
‘ಈ ವರ್ಷ ಜುಲೈಗೆ ಒಟ್ಟು ಇಷ್ಟಾಯ್ತು ಮಳೆ , ಹೋದ ವರ್ಷ ಈ ಟೈಮಿಗೆ ಇಷ್ಟಾಗಿತ್ತು ,1975ನೇ ಇಸ್ವಿಯಲ್ಲಿ ಹಿಂಗೇ ಮಳೆ. 1992ರಲ್ಲೂ ಇದೇ ಥರ ಗಾಳಿ ಮಳೆ’ ಅಂತೆಲ್ಲ ನಮ್ಮ ಕಾಫಿ ತೋಟದವರ ಮಾತುಕತೆ ಮುಂದುವರೆಯುತ್ತದೆ ಚಿಕ್ಕಂದಿನಿಂದಲೂ ನಾವು ರೇಡಿಯೋದಲ್ಲಿ ಕೇಳಿದ್ದ ‘ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯುವುದು, ದಕ್ಷಿಣ ಒಳನಾಡಿನಲ್ಲಿ ಚದುರಿದಂತೆ ಗುಡುಗು ಸಹಿತ ಮಳೆ’ ಹವಾಮಾನ ಮುನ್ಸೂಚನೆ ಎಂದಿಗೂ ಫಲ ಕೊಡದೆ ಹವಾಮಾನ ಎನ್ನುವುದು ಅವಮಾನ ಮುನ್ಸೂಚನೆ ಅಂತಾಗಿ ನಗುವ ವಿಷಯವಾಗಿತ್ತು.
ಈಗ ಹಾಗಲ್ಲ. ‘ಹಲ್ಲೋ ಗೂಗಲ್. ಟುಡೆ ರೈನ್ ಇನ್ ಅವರ್ ಏರಿಯಾ’ ಅಂತ ಓದು ಬರಹ ಬಾರದವನೂ ಗೂಗಲಮ್ಮನನ್ನು ಕೇಳಿ ಅದು ಕೊಡುವ ಉತ್ತರ ಶೇಕಡ 80 ರಷ್ಟು ಪಾಸಾಗುವುದರಿಂದ ಮಾಡಬೇಕಾದ ಕೆಲಸ ಕಾರ್ಯಗಳ ಪ್ಲ್ಯಾನ್ ಮಾಡಿಕೊಳ್ತಿದ್ದಾರೆ. ಈಗಂತೂ ಪ್ರತಿ ಅ್ಯಂಡ್ರಾಯ್ಡ್ ಫೋನಿನಲ್ಲೂ ಪ್ರತಿ ದಿನದ ಮಳೆ ಹಾಗು ಉಷ್ಣಾಂಶ ಮಾಹಿತಿ ಸಿಗುತ್ತಿದೆ. ಮುಂದುವರೆದಂತೆ ಮುಂದಿನ ವಾರದ ಮುಂದಿನ ತಿಂಗಳ ಮಳೆಯ ಮುನ್ಸೂಚನೆ ಕೂಡ ನಮಗೀಗ ಲಭ್ಯವಿದೆ.
ಇನ್ನು ನಮ್ಮ ಈಗಿನ ಟಿವಿಯವರು ಹೇಳುವ ‘ಮುಳುಗುತ್ತಿದೆ ಬದುಕು, ಗಂಜಿ ಕೇಂದ್ರ’ ದಂತಹ ಪದಗಳಲ್ಲಿ ವಾಸ್ತವ ನೂರಕ್ಕೆ ಮೂರರಷ್ಟು ಮಾತ್ರ . ಬೇರೆ ಊರಿನ ಮಂದಿ ಹೇಳುವ ಭಯಂಕರ ಮಳೆ, it’s raining cats and dogs, ಸಖತ್ ಮಳೆ ಯೆನ್ನುವ ಮಳೆಯ ಲೆಕ್ಕದ ಪ್ರಮಾಣಗಳು ಎಂದಿಗೂ ನಿಖರತೆ ಕೊಡುವುದಿಲ್ಲ.
ನಮ್ಮಲ್ಲಿ ಹಾಗಲ್ಲ. ಬಹುತೇಕ ಎಲ್ಲ ಕಾಫಿ ಬೆಳೆಗಾರರ ಮನೆ ಮುಂದಿನ ಫಸಲು ಒಣಗಿಸುವ ಅಂಗಳದಲ್ಲಿ (drying yard)ನಲ್ಲಿ ಕಡು ಬೇಸಿಗೆಯ ದಿನಗಳನ್ನು ಹೊರತು ಪಡಿಸಿ ಉಳಿದೆಲ್ಲ ದಿನಗಳಲ್ಲೂ ಮಳೆ ಮಾಪಕ (rain gauge) ಇದ್ದೇ ಇರುತ್ತದೆ. ಪ್ರತಿನಿತ್ಯದ ಮಳೆಯನ್ನು ಅಳೆದು ಅದನ್ನು ಹಂಚಿಕೊಳ್ಳುವ ವಿಧಾನ ನಮ್ಮ ಕಾಫಿ ನಾಡಿಗಿದೆ. ಮಳೆಗಾಲದಲ್ಲಂತೂ ನಮ್ಮ ಕಾಫಿ ವಾಟ್ಸಪ್ ಗ್ರೂಪಗಳು ಅಂದಂದಿನ ಆಯಾ ಊರಿನ ಮಳೆಯ ಪ್ರಮಾಣದಿಂದ ತುಂಬಿರುತ್ತದೆ.
ಮುಂಗಾರು ಪೂರ್ವ ಮಳೆಯಿಂದ ಈ ದಾಖಲಾತಿ ಆರಂಭವಾಗುತ್ತದೆ. ಇಡೀ ವರ್ಷ ಸುರಿದ ಪ್ರತಿದಿನದ ಮಳೆಯನ್ನು ಬರೆದುಕೊಂಡು ವಾರ್ಷಿಕವಾಗಿ ಸುರಿದ ಒಟ್ಟು ಮಳೆಯ ಕರಾರುವಾಕ್ಕು ಮಾಹಿತಿ ಕೊಡುತ್ತಾರೆ.
ವಾರ್ಷಿಕವಾಗಿ ಪ್ರತಿ ಮಳೆ ನಕ್ಷತ್ರದಲ್ಲೂ ಸುರಿದ ಮಳೆ ಪ್ರಮಾಣ ಕೂಡಿಸಿ ಅಂಕಿಅಂಶ ಇಡುವವರೂ ನಮ್ಮಲ್ಲಿದ್ದಾರೆ. ಪ್ರತಿ ಕಾಫಿ ಬೆಳೆಗಾರರ ಬಳಿಯೂ ತಮ್ಮ ತೋಟಕ್ಕೆ ಸುರಿದ ಇಪ್ಪತ್ತು ಮುವ್ವತ್ತು ವರ್ಷಗಳ ಮಳೆ ದಾಖಲೆ ಇರುತ್ತದೆ.
ನ್ಯೂಸ್ ಗಳಲ್ಲಿ ಬರುವ ‘ಮಿಮೀ ‘ ಅಳತೆಯ ಮಳೆ ನಮ್ಮಲ್ಲಿ ಇಂಚು ಮತ್ತು ಸೆಂಟ್ಸ್ ಗಳಲ್ಲಿ ದಾಖಲಾಗುತ್ತದೆ. ಅಂದರೆ ಇಂದು ಉಡುಪಿಯಲ್ಲಿ ಸುರಿದ ಮಳೆಯ ಪ್ರಮಾಣ ಇಪ್ಪತ್ತು ಮಿಮೀ ಅಂತ ನ್ಯೂಸ್ ಹೇಳಿದ್ರೆ ನಾವು ಅದನ್ನು ಇಂಚ್ ಗೆ ಬದಲಾಯಿಸಿ ಹೇಳುತ್ತೇವೆ.
ಒಂದು ಇಂಚ್ = ಇಪ್ಪತ್ತೈದು ಮಿಮೀ ಮಳೆ.
ಒಂದು ಪ್ರದೇಶಕ್ಕೆ ಸುರಿದ ಒಂದು ಮಿಮೀ ಮಳೆ ಎಂದರೆ ಅದು ಒಂದು ಮಿಮೀ ಮಣ್ಣಿನ ಆಳಕ್ಕಷ್ಟೇ ಇಳಿಯುತ್ತದೆ. ಒಂದು ಇಂಚು ಮಳೆ ಸುರಿಯಿತು ಎಂದರೆ ಭೂಮಿಯ ಒಂದು ಇಂಚಿನಷ್ಟು ಆಳಕ್ಕೆ ಇಳಿಯಬಹುದಾದಷ್ಟು ಮಳೆ ಸುರಿಯಿತು ಎಂದರ್ಥ. ಇದು ಮಳೆಯ ಸರಳ ಲೆಕ್ಕಾಚಾರ.
ಕಾಫಿನಾಡಿನಲ್ಲಿ ಸಾಮಾನ್ಯ ಬೆಳೆಗಾರರು ಎರಡು ಮೂರು ದಶಕದ ವಾರ್ಷಿಕ ಮಳೆ ಲೆಕ್ಕ ಇಟ್ಟಿದ್ದರೆ ಕೆಲವು ಕಂಪನಿ ಎಸ್ಟೇಟ್ ಗಳು ನೂರು ವರ್ಷದ ಮಳೆ ಮತ್ತು ಉಷ್ಣಾಂಶದ ಲೆಕ್ಕ ಇಟ್ಟಿರುತ್ತಾರೆ.
ಅಚ್ಚರಿಯೆಂದರೆ ಪ್ರತಿ ಇಪ್ಪತ್ತು ವರ್ಷಗಳಿಗೊಮ್ಮೆ ಮಳೆಯ ಏರಿಳಿಕೆ ಝಿಗ್ ಝ್ಯಾಗ್ ಮಾದರಿಯಲ್ಲಿ ಬದಲಾಗಿದೆ!! ಜಾಗತಿಕ ತಾಪಮಾನದ ಏರಿಕೆ ಯಂತಹ ಸಂಗತಿಗಳು ಅಷ್ಟಾಗಿ ಚರ್ಚೆಗೆ ಬರದಿದ್ದಾಗಲೂ ಕೂಡ ಮಳೆಯ ಈ ಏರಿಳಿಕೆ ಹೀಗೇ ಇದೆ.
ಆದರೆ ನಮ್ಮ ಹಿರಿಯರು ಹೇಳುವ ಪ್ರಕಾರ ತೊಂಬತ್ತರ ದಶಕದ ನಂತರದ ಅತಿವೇಗದ ಜಾಗತಿಕ ತಾಪಮಾನ ಏರಿಕೆ ಮತ್ತು ಅಭಿವೃದ್ಧಿ ಕೆಲಸಗಳು ಮತ್ತು ಪಶ್ಚಿಮ ಘಟ್ಟಗಳಲ್ಲಿ ಆದ ಭೂನಕ್ಷೆಯ ಬದಲಾವಣೆಯಿಂದಾಗಿ ಮಳೆ ಮಾದರಿಗಳು ( pattern of rain) ನಲ್ಲಿ ಅತಿರೇಕಗಳಾಗುತ್ತಿವೆ. ಮೇಘಸ್ಪೋಟ ಎನ್ನುವ ಪದ ಮತ್ತೆಮತ್ತೆ ಬಳಕೆಯಾಗ್ತಿರುವುದು ಕೂಡ ಇತ್ತೀಚೆಗೆ. ಆದರೆ ಮಳೆ ಎಂತಿದ್ದರೂ ಜೀವದಾಯಿನಿ.
ಇಡೀ ಕಾಫಿ ತೋಟದ ತುಂಬಾ ಇರುವ ಇಂಗುಗುಂಡಿಗಳು ಸುರಿದ ಮಳೆಯನ್ನು ಇಂಗಿಸಿ ತೋಟವನ್ನು ತಂಪಾಗಿಡುತ್ತವೆ ಮತ್ತು ಅಂತರ್ಜಲ ಮಟ್ಟದ ಏರಿಕೆಗೆ ಕಾರಣವಾಗಿವೆ. ಮುಂಗಾರು ಮಳೆ ನಕ್ಷತ್ರಗಳು ಭರಪೂರ ಸುರಿಯಲಿ, ನಾಡು ಸುಭಿಕ್ಷವಾಗಿರಲಿ. ಮಲೆನಾಡಿನ ಜೀವನದಿಗಳು ಮೈದುಂಬಿ ಹರಿದರೆ ಬಯಲುಸೀಮೆಯೂ ತಕ್ಕಮಟ್ಟಿಗೆ ತಂಪು. ಜೀವ ಜಗತ್ತಿಗೆ ಒಂದಿಷ್ಟು ನೆಮ್ಮದಿ.