
ತೆಂಗು,ಅಡಿಕೆ,ಇನ್ನಿತರೇ ತೋಟಗಾರಿಕೆ ಬೆಳೆಗಳ ಸಾಲಿನ ನಡುವೆ ಕಂದಕ(ಟ್ರೆಂಚ್) ನಿರ್ಮಾಣ ಮಾಡುವುದರಿಂದ ಸಾಕಷ್ಟು ಅನುಕೂಲವಾಗಲಿದೆ. ಟ್ರೆಂಚ್ ಅಳತೆ:03 ಅಡಿ ಅಗಲ, 02 ಅಡಿ ಅಳ ಹಾಗು ಉದ್ದ 15-20 ಅಡಿ,ನಂತರ 03 ಅಡಿ ಗ್ಯಾಪ್ ಇರಲಿ. ಟ್ರೆಂಚ್ ನಿರ್ಮಾಣ ಮಾಡಲು ಜೆಸಿಬಿ ಗಿಂತ ಹಿಟಾಚಿ ಮೂಲಕ ಮಾಡುವುದರಿಂದ ಕೆಲಸ ವೇಗವಾಗಿ, ಚೆನ್ನಾಗಿ ಆಗುತ್ತದೆ, ಹಣ ಉಳಿತಾಯವಾಗುತ್ತದೆ.
ಇಳಿಜಾರಿಗೆ ಆಡಲಾಗಿ ಟ್ರೆಂಚ್ ಮಾಡಬೇಕು. ಉದಾಹರಣೆಗೆ ನಿಮ್ಮ ಜಮೀನು ದಕ್ಷಿಣದಿಂದ ಉತ್ತರದ ಕಡೆ ಇಳಿಜಾರಿದರೆ(Slope) ಪೂರ್ವ -ಪಶ್ಚಿಮಕ್ಕೆ ಟ್ರೆಂಚ್ ಇರಬೇಕು,ಟ್ರೆಂಚ್ ತೆಗೆದ ಮಣ್ಣು ಟ್ರೆಂಚ್ ನಿಂದ ಒಂದು ಅಡಿ ಬಿಟ್ಟು ದಕ್ಷಿಣದ ಕಡೆಗೆ ಹಾಕಬೇಕು. ಟ್ರೆಂಚ್ ಮಾಡುವುದರಿಂದ ತೋಟಗಾರಿಕೆಯ ತ್ಯಾಜ್ಯ ನಿರ್ವಹಣೆ ಸುಲಭವಾಗುತ್ತದೆ. ತೋಟದಲ್ಲಿ ಬಿದ್ದ ತ್ಯಾಜ್ಯವನ್ನು ಟ್ರೆಂಚ್ ಒಳಗೆ ಹಾಕಬಹುದು,ತ್ಯಾಜ್ಯ ತೆಗೆಯಲು ಕಾರ್ಮಿಕರ ಅವಲಂಬನೆ ಬೇಕಾಗುವುದಿಲ್ಲ,
ಬೇಸಿಗೆಯಲ್ಲಿ ತೋಟಕ್ಕೆ ಬೆಂಕಿಯಿಂದ ರಕ್ಷಣೆ ಅಗತ್ಯ. ಟ್ರೆಂಚ್ ಒಳಗೆ ಬಾಳೆ, ಬದು(Bund) ಮೇಲೆ ಅರಿಶಿನ,ಶುಂಠಿ,ಮೆಣಸು,ಕೊಕೊ,ಹಣ್ಣಿನ ಗಿಡ,ಗೆಡ್ಡೆ ಬೆಳೆ,ಇತ್ಯಾದಿ ಬೆಳೆ ಮಾಡಬಹುದು.ಗೊಬ್ಬರವನ್ನು ಟ್ರೆಂಚ್ ಒಳಗೆ ಹಾಕುವುದರಿಂದ ಗೊಬ್ಬರ ಹಾಕುವುದು ಹೆಚ್ಚು ಶ್ರಮದಾಯಕವಾಗುವುದಿಲ್ಲ.ಇಡೀ ತೋಟವೇ ಗೊಬ್ಬರದ ಗುಂಡಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ಮಳೆ ನೀರಿನ ಕುಯ್ಲು ಆಗುವುದರಿಂದ ಬೋರ್ವೆಲ್ ರಿಚಾರ್ಜ್,ಟ್ರೆಂಚ್ ಒಳಗೆ ತೇವಾಂಶ ನಿರ್ಮಾಣವಾಗುವುದರಿಂದ ಗಿಡ/ಮರಗಳಿಗೆ ಸದಾ ಕಾಲ ನೀರು ಸಿಗುತ್ತದೆ,ನೀರಿನ ಬಳಕೆ ಕಡಿಮೆಯಾಗುತ್ತದೆ.ಹೆಚ್ಚಿನ ನೀರು ಟ್ರೆಂಚ್ ನಲ್ಲಿ ಬಸಿದು ಹೋಗುವುದರಿಂದ ಮಣ್ಣಿನಲ್ಲಿ ಗಾಳಿಯಾಡುವಿಕೆ ಜಾಸ್ತಿಯಾಗಿ ಬೇರಿನ ಮತ್ತು ಗಿಡದ ಬೆಳವಣಿಗೆ ಉತ್ತಮವಾಗಿರುತ್ತದೆ,ಮಣ್ಣಿನ ಸವಕಳಿ ತಪ್ಪುತ್ತದೆ.
ಟ್ರೆಂಚ್ ಒಳಗೆ ಹ್ಯೂಮಸ್ (Humus) ನಿರ್ಮಾಣವಾಗಿ ಗಿಡಗಳಿಗೆ ಗೊಬ್ಬರ ಮತ್ತು ನೀರನ್ನು ಪೂರೈಸುತ್ತದೆ. ಒಟ್ಟಾರೆಯಾಗಿ ತೋಟದಲ್ಲಿ ಟ್ರೆಂಚ್ ನಿರ್ಮಾಣವನ್ನು ವೈಜ್ಞಾನಿಕವಾಗಿ ಮಾಡಿಕೊಳ್ಳುವುದರಿಂದ ತೋಟದಲ್ಲಿ ಸುಸ್ಥಿರತೆ ಸಾಧಿಸುವ ಎಲ್ಲಾ ಅವಕಾಶಗಳು ತೆರೆದುಕೊಳ್ಳುತ್ತದೆ.
ಪ್ರಶಾಂತ್ ಜಯರಾಮ್, ಕೃಷಿಕರು ಮತ್ತು ಕೃಷಿ ಸಲಹೆಗಾರರು. ಮೊಬೈಲ್:9342434530