ಬೆಂಗಳೂರು, ಮಾರ್ಚ್ 19: ಕೇಂದ್ರ ಸರ್ಕಾರ ನಿಗಧಿಪಡಿಸಿರುವ ಪ್ರತಿ ಕ್ವಿಂಟಾಲ್ ತೊಗರಿಗೆ ರೂಪಾಯಿ 7550 ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ ರೂಪಾಯಿ 450 ಪ್ರೋತ್ಸಾಹಧನ ನೀಡಿ ರೈತರಿಂದ ತೊಗರಿ ಬೇಳೆ ಖರೀದಿ ಮಾಡಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು.
ಅವರು ಇಂದು ವಿಧಾನ ಪರಿಷತ್ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮುಖ್ಯ ಸಚೇತಕರಾದ ರವಿಕುಮಾರ್ ಹಾಗೂ ಇತರ ಸದಸ್ಯರು ನಿಯಮ 330 ರಡಿ ಕಲಬುರಗಿ ಜಿಲ್ಲೆಯಲ್ಲಿ ನೇಟೆ ರೋಗ, ಅತಿವೃಷ್ಠಿ/ ಅನಾವೃಷ್ಠಿ ಯಿಂದ ತೊಗರಿ ಬೆಳೆಗಾರರ ಬದುಕು ದುಸ್ತರವಾಗಿದ್ದು, ರಾಜ್ಯ ಸರ್ಕಾರ ಅವರ ನೆರವಿಗೆ ಬರುವಂತೆ ಕೋರಲಾದ ಸೂಚನೆಗೆ ಸಚಿವರು ಉತ್ತರಿಸಿದರು.
2024-25 ನೇ ಮುಂಗಾರು ಹಂಗಾಮಿನಲ್ಲಿ ಕಲಬುರಗಿ ಜಿಲ್ಲೆಯ 1.7 ಲಕ್ಷ ರೈತರು ತೊಗರಿ ಬೆಳೆಗೆ ವಿಮೆ ಮಾಡಿಸಿದ್ದು, ಈ ಪೈಕಿ 1.69 ಲಕ್ಷ ರೈತರಿಗೆ ರೂ 70.47 ಕೋಟಿ ವಿಮಾ ಪರಿಹಾರ ಇತ್ಯರ್ಥಪಡಿಸಲಾಗಿದೆ ಎಂದು ಕೃಷಿ ಸಚಿವರು ತಿಳಿಸಿದರು.
ಸದರಿ ಸಾಲಿನಲ್ಲಿ ಕೇಂದ್ರದ ಬೆಂಬಲ ಬೆಲೆ ಮತ್ತು ನಮ್ಮ ಸರ್ಕಾರದ ಪ್ರೋತ್ಸಾಹ ಧನ ಸೇರಿ ಒಟ್ಟಾರೆಯಾಗಿ ಪ್ರತಿ ಕ್ವಿಂಟಾಲ್ ತೊಗರಿಗೆ 8 ಸಾವಿರ ರೂಗಳಂತೆ ಖರೀದಿ ಕೇಂದ್ರಗಳ ಮೂಲಕ ಪ್ರತಿ ರೈತರಿಂದ ಗರಿಷ್ಟ 40 ಕ್ವಿಂಟಾಲ್ ವರೆಗೆ ಖರೀದಿಸಲಾಗುತ್ತಿದೆ. ಇದೇ ಮಾರ್ಚ್ 5 ರವರೆಗೆ ರೈತರಿಂದ 25,401 ಮೆಟ್ರಿಕ್ ಟನ್ ತೊಗರಿಯನ್ನು ಖರೀದಿಸಲಾಗಿದ್ದು, ಖರೀದಿ ಪ್ರಕ್ರಿಯೆ ಇದೇ ಏಪ್ರಿಲ್ 2 ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದರು